ಬೆಂಗಳೂರು: ಪರಿಸರ, ಜಲಾಶಯಗಳು ದೇವಾಲಯ, ಪ್ರವಾಸಿ ತಾಣಗಳು ಸೇರಿದಂತೆ ಪಾರಂಪರಿಕ ಸ್ಥಳಗಳ ಸಂರಕ್ಷಿಸಿ ಪೋಷಿಸಲು ಸ್ಥಾಪನೆಯಾಗಿರುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಗೆ ₹ 10 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸುಮಾರು 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಅರಗ ಜ್ಞಾನೇಂದ್ರ ಹಾಗೂ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಜರಿದ್ದರು.
ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳು, ಉದ್ಯಾನವನ, ಪ್ರವಾಸಿ ತಾಣ, ಜಲಾಶಯಗಳು, ವಿಶ್ವವಿದ್ಯಾಲಯಗಳು, ಮ್ಯೂಸಿಯಂ, ಸ್ಮಾರಕಗಳು ಸೇರಿದಂತೆ ಇತಿಹಾಸ ಪ್ರಸಿದ್ದ ಪಾರಂಪರಿಕ ಸ್ಥಳಗಳನ್ನು ಅಭಿವೃದ್ದಿಪಡಿಸಲು ಕ್ರಿಯಾಯೋಜನೆ ರೂಪಿಸಲಾಯಿತು. ರಾಜ್ಯದ ಏಕೈಕ ಗಮಕ ಗ್ರಾಮವೆಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ತಾಲ್ಲೂಕಿನ ಹೊಸಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿ ಸಂಸ್ಕೃತ ಭಾಷೆ ಮತ್ತು ಗಮಕ ಕಲೆ ಪ್ರೋತ್ಸಾಹಿಸಲು ₹ 25 ಲಕ್ಷ, ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ನದಿ ಉಗಮಸ್ಥಾನ ಅಂಬುತೀರ್ಥದ ರಾಮೇಶ್ವರ ದೇವಾಲಯ ಸಮೀಪದಲ್ಲಿ ಸಭಾಭವನ ನಿರ್ಮಾಣಕ್ಕೆ ₹ 1.81 ಕೋಟಿ ಅನುದಾನ ನೀಡಲು ಸಭೆ ನಿರ್ಧರಿಸಿದೆ.
ಚಿಕ್ಕಮಗಳೂರು ತಾಲ್ಲೂಕಿನ ಹೊಯ್ಸಳರ ಉಗಮ ಸ್ಥಾನ ಅಂಗಡಿಯಲ್ಲಿನ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ₹ 50 ಲಕ್ಷ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಮಲವಳ್ಳಿಯಲ್ಲಿರುವ ನೈಸರ್ಗಿಕ ಕಲ್ಲುಸಂಕವನ್ನು ಭೂ ವೈಜ್ಞಾನಿಕ ಸ್ಮಾರಕವಾಗಿ ಸಂರಕ್ಷಿಸಲು ₹ 25 ಲಕ್ಷ, ಹೈಗುಂದದ ಯಕ್ಷ ಮೂರ್ತಿಗೆ ₹ 25 ಲಕ್ಷ, ಆಂಕೋಲ ತಾಲ್ಲೂಕಿನ ಬಬ್ರುವಾಡ ಹತ್ತಿರದ ಬುದ್ದನ ಮೂರ್ತಿ ಸಂರಕ್ಷಣೆಗೆ ₹ 25 ಲಕ್ಷ ಅನುದಾನ ಒದಗಿಸಲಾಗಿದೆ.
ಶಿರಸಿ ತಾಲ್ಲೂಕಿನ ಗುದ್ನಾಪುರ ಗ್ರಾಮದ ಬಂಗಾರೇಶ್ವರ ದೇವಸ್ಥಾನ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ₹ 25 ಲಕ್ಷ, ಯಲ್ಲಾಪುರ ತಾಲ್ಲೂಕು ವಜ್ರಹಳ್ಳಿ ಗ್ರಾಮದ ಹೊನ್ನಗದ್ದೆಯ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹ 25 ಲಕ್ಷ, ಮುಂಡಗೋಡಿನ ರಾಮಲಿಂಗೇಶ್ವರ ದೇವಸ್ಥಾನಕ್ಕೆ ₹ 25 ಲಕ್ಷ ಹಾಗೂ ಹಳಿಯಾಳ ತಾಲ್ಲೂಕಿನ ಅರ್ಲವಾಡಿ ಗ್ರಾಮ ಪಂಚಾಯಿತಿಯ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿಗೆ ₹ 25 ಲಕ್ಷ ಒದಗಿಸಲಾಗಿದೆ.
ಉಡುತಡಿಯಲ್ಲಿ ಆ್ಯಂಪಿ ಥಿಯೇಟರ್
ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯನ್ನು ದೆಹಲಿಯ ಅಕ್ಷರಧಾಮ ಮಾದರಿಯಂತೆ ಆ್ಯಂಪಿ ಥಿಯೇಟರ್, ಬೆಳಕು ಮತ್ತು ಶಬ್ದ ಮಾಧ್ಯಮ ಇತರೆ ಸೌಲಭ್ಯ ಕಲ್ಪಿಸಲು ₹ 3 ಕೋಟಿ, ಬೇಗೂರಿನಲ್ಲಿ ಬನ್ನಿಮಂಟಪ ನಿರ್ಮಾಣಕ್ಕೆ ₹ 50 ಲಕ್ಷ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೇಮಾವತಿ ನದಿ ಉಗಮ ಸ್ಥಳದ ಸಂರಕ್ಷಣಾ ಮತ್ತು ಅಭಿವೃದ್ಧಿಗೆ ₹ 50 ಲಕ್ಷ, ಗಂಗಾ ಮೂಲದಲ್ಲಿ ಹುಟ್ಟುವ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿ ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ₹ 25 ಲಕ್ಷ, ಮೂಡಿಗೆರೆ ತಾಲ್ಲೂಕಿನ ದೇವರಮನೆ ಕಾಲಭೈರವೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿಯ ಜೀವನೋದ್ದಾರಕ್ಕೆ ₹ 50 ಲಕ್ಷ, ಬಲ್ಲಾಳರಾಯನದುರ್ಗ ಕೋಟೆ ಸಂರಕ್ಷಣೆಗೆ ₹ 1 ಕೋಟಿ, ಹಿರೇಮಗಳೂರು ಐತಿಹಾಸಿಕ ಕೋದಂಡರಾಮ ಸ್ವಾಮಿ ದೇವಸ್ಥಾನ ಮತ್ತು ಪುಷ್ಕರಣಿಯ ಸಮಗ್ರ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಲು ಸಮ್ಮತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.