ಬಾಗಲಕೋಟೆ: ‘ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲಿದ್ದೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶವೇ ಅದಕ್ಕೆ ಸೂಚನೆ ಎಂದರು.
‘ಬಿಜೆಪಿಯವರು ಅಕ್ಕಿ ವಿತರಣೆ ಪ್ರಮಾಣ 7ರಿಂದ 5 ಕೆ.ಜಿಗೆ ಇಳಿಸಿದ್ದಾರೆ. ಯಡಿಯೂರಪ್ಪ ಅವರಪ್ಪನ ಮನೆಯಿಂದ ಕೊಡುತ್ತಿದ್ದರಾ’ ಎಂದು ಅವರು ಪ್ರಶ್ನಿಸಿದರು.
‘ಕಾಯಕವೇ ಕೈಲಾಸ ಎನ್ನುವುದರಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡಿದೆ. ನನ್ನ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಗಳನ್ನು ಬಿಜೆಪಿಯವರು ನಿಲ್ಲಿಸಲು ಹೊರಟಿದ್ದಾರೆ.ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಕ್ಕಳಿಗೆ ಹಾಲು,ಶೂ, ಸಮವಸ್ತ್ರ ಕೊಟ್ಟಿದ್ದು ಬಿಜೆಪಿನಾ? ವಿದ್ಯಾಸಿರಿ,ಕೃಷಿ ಭಾಗ್ಯ ಈಗ ಇದೆಯಾ? ಸಾಲಮನ್ನಾ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಸರ್ಕಾರ ಸಾಲಮನ್ನಾ ಮಾಡಿದ್ದು ತೋರಿಸಲಿ? ಅವರು ಮಾನ ಮರ್ಯಾದೆ ಇಲ್ಲದ, ಲಜ್ಜೆಗೆಟ್ಟವರು’ ಎಂದು ಹರಿಹಾಯ್ದರು.
‘ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ನಾನು ರೈತನ ಮಗ ಅನ್ನುತ್ತಾರೆ. ಹಾಗಾದರೆ ನಾವು ಯಾರ ಮಕ್ಕಳು’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ವಿರೋಧ ಪಕ್ಷದ ನಾಯಕನಾಗಿ ಇವರಿಗೆ ಕಿವಿಮಾತು ಹೇಳಬಹುದು ಅಷ್ಟೇ. ಲಜ್ಜೆಗೆಟ್ಟ ಇವರನ್ನು ಹಿಡಿದು ಹೊಡೆಯೋಕೆ ಆಗುತ್ತಾ?’ ಎಂದು ಸಿದ್ದರಾಮಯ್ಯ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.