ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಆರಂಭಗೊಂಡ ಕ್ಷೀರಧಾರೆ ಯೋಜನೆ ಇಂದಿಗೆ ಹತ್ತು ವರ್ಷ ಪೂರೈಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕ್ಷೀರಧಾರೆ ಯೋಜನೆ ಜಾರಿ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 2013ರ ಆಗಸ್ಟ್ 1ರಂದು ನಮ್ಮ ಸರ್ಕಾರ ಶಾಲಾ ಮಕ್ಕಳಿಗೆ ನಿತ್ಯ ಕೆನೆಭರಿತ ಹಾಲು ನೀಡುವ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ತಂದಿತ್ತು. ನಮ್ಮ ಈ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳು ತುಂಬಿದೆ. ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ನೆರವಾದ ಸಂತೃಪ್ತಿ ನನ್ನದು‘ ಎಂದು ಹೇಳಿದ್ದಾರೆ.
ವಿಶ್ವ ಡೇರಿ ಫೆಡರೇಷನ್‌ನಿಂದ ನೀಡಲಾಗುವ ‘ಅಂತರರಾಷ್ಟ್ರೀಯ ಅತ್ಯುತ್ತಮ ಯೋಜನೆ ಪ್ರಶಸ್ತಿ - 2022‘ ಅನ್ನು ಈ ಯೋಜನೆ ಪಡೆದಿದ್ದು, ಯೋಜನೆಯನ್ನು ಜಾರಿಗೊಳಿಸಿರುವುದು ಹೆಮ್ಮೆಯುಂಟು ಮಾಡಿದೆ ಎಂದು ಟ್ವಿಟರ್‌ನಲ್ಲಿ ಸಿಎಂ ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ? ಎಂದು ನಳೀನ್ ಕುಮಾರ್ ಕಟೀಲ್ ಅವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.