ADVERTISEMENT

ಮೆಟ್ರೊ ಯೋಜನೆಗೆ 104 ಮರಗಳಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 21:23 IST
Last Updated 5 ಮಾರ್ಚ್ 2021, 21:23 IST

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಗೆ 104 ಮರಗಳು ಜಾಗ ಮಾಡಿಕೊಡಬೇಕಾಗಿದ್ದು, ಇವುಗಳಲ್ಲಿ ಕೆಲವನ್ನು ಕಡಿದರೆ, ಕೆಲವು ಮರಗಳನ್ನು ಸ್ಥಳಾಂತರ ಮಾಡಲಾಗುತ್ತದೆ.

ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ ನಿಲ್ದಾಣದ ವಿಸ್ತರಿತ ಮಾರ್ಗ ನಿರ್ಮಾಣಕ್ಕೆ 91 ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ಇನ್ನು 13 ಮರಗಳು ಬೊಮ್ಮಸಂದ್ರ ಮಾರ್ಗ ನಿರ್ಮಾಣಕ್ಕೆ ತೆರವಾಗಲಿವೆ.

ಬೆಂಗಳೂರು ನಗರ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಈ ಮರಗಳನ್ನು ಕಡಿಯಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಅನುಮತಿ ನೀಡಿದ್ದಾರೆ. ಮರಗಳ ತಜ್ಞರ ಸಮಿತಿ (ಟಿಇಸಿ) ಶಿಫಾರಸ್ಸಿನ ನಂತರ ರೀಚ್‌ 1 (ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌) ಹಾಗೂ ರೀಚ್‌ 5 (ಆರ್.ವಿ. ರಸ್ತೆ–ಬೊಮ್ಮಸಂದ್ರ) ಮಾರ್ಗದಲ್ಲಿ ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಈ ಅನುಮತಿ ದೊರೆತಿದೆ.

ADVERTISEMENT

ರೀಚ್‌ 1ರಲ್ಲಿ 39 ಮರಗಳನ್ನು ಕಡಿದರೆ, 52 ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಹೊಸ ಮಾರ್ಗ ನಿರ್ಮಾಣಕ್ಕೆ ಈ ಮರಗಳನ್ನು ತೆರವುಗೊಳಿಸಬೇಕಾದುದು ಅನಿವಾರ್ಯ ಎಂದು ತಜ್ಞರ ಸಮಿತಿ ಹೇಳಿದೆ.

107 ಆಕ್ಷೇಪಣೆ:ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. 107 ಮಂದಿ ಆಕ್ಷೇಪಣೆ ಸಲ್ಲಿಸಿದ್ದರು. ಇವುಗಳನ್ನು ಪರಿಶೀಲಿಸಿದ ಟಿಇಸಿ, ಸಮಗ್ರ ವರದಿಯನ್ನು ನೀಡಿದೆ.

ಅಲ್ಲದೆ, ಕಡಿಯಲಿರುವ ಮರಗಳಿಗೆ ಪರ್ಯಾಯವಾಗಿ 910 ಸಸಿಗಳನ್ನು ನೆಡಬೇಕು ಹಾಗೂ ಈ ಸಂಬಂಧ ಯೋಜನಾ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು ಎಂದು ವೃಕ್ಷ ಅಧಿಕಾರಿ ಬಿಎಂಆರ್‌ಸಿಎಲ್‌ಗೆ ಆದೇಶ ನೀಡಿದ್ದಾರೆ.

ಸ್ಥಳಾಂತರಿಸಿ ನೆಡಲಾದ ಮರಗಳನ್ನು ಮೂರು ವರ್ಷಗಳವರೆಗೆ ಪೋಷಿಸುವ ಜವಾಬ್ದಾರಿಯನ್ನು ಬಿಎಂಆರ್‌ಸಿಎಲ್‌ ನಿಭಾಯಿಸಬೇಕು ಮತ್ತು ಮರಗಳ ಸ್ಥಿತಿ–ಗತಿ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ವರದಿ ಕೊಡಬೇಕು ಎಂದು ನಿಗಮಕ್ಕೆ ಸೂಚನೆ ನೀಡಲಾಗಿದೆ.

ಬೊಮ್ಮಸಂದ್ರ ಮಾರ್ಗದಲ್ಲಿ 13 ಮರ:ರೀಚ್‌ 5ಗೆ 15 ಮರಗಳನ್ನು ಕಡಿಯುವ ಪ್ರಸ್ತಾವವನ್ನು ನಿಗಮ ನೀಡಿತ್ತು. ಎಂಟು ಆಕ್ಷೇಪಣೆಗಳು ಸಾರ್ವಜನಿಕರಿಂದ ಬಂದಿದ್ದವು. ಟಿಇಸಿಯು 13 ಮರಗಳನ್ನು ಕಡಿಯುವುದಕ್ಕೆ ಮಾತ್ರ ಅನುಮತಿ ನೀಡಿದೆ. ಒಂದು ಮರಕ್ಕೆ ಕಡಿಯುವುದಕ್ಕೆ ಪರವಾಗಿ ಹತ್ತು ಸಸಿಗಳನ್ನು ನೆಟ್ಟು ಪೋಷಿಸುವಂತೆ ಟಿಇಸಿಯು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.