ADVERTISEMENT

ವಿಧಾನಸಭೆಯಿಂದ ಪರಿಷತ್‌ಗೆ 3 ಪಕ್ಷಗಳಿಂದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 10:54 IST
Last Updated 6 ಜೂನ್ 2024, 10:54 IST
   

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಗುರುವಾರ ಮಧ್ಯಾಹ್ನ 3ರವರೆಗೆ ಕಾಲಾವಕಾಶವಿತ್ತು. ಯಾರೂ ನಾಮಪತ್ರ ಹಿಂದಕ್ಕೆ ಪಡೆಯದ ಕಾರಣ, ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಘೋಷಿಸಿದರು.

ಕಾಂಗ್ರೆಸ್‌ನ ಎನ್.ಎಸ್.ಬೋಸರಾಜು, ಐವನ್‌ ಡಿಸೋಜ, ಕೆ.ಗೋವಿಂದರಾಜ್‌, ಜಗದೇವ ಗುತ್ತೇದಾರ್, ಡಾ.ಯತೀಂದ್ರ, ಎ.ವಸಂತಕುಮಾರ್‌, ಬಿಲ್ಕಿಸ್‌ ಭಾನು, ಬಿಜೆಪಿಯ ಸಿ.ಟಿ.ರವಿ, ಎನ್‌.ರವಿಕುಮಾರ್‌ ಮತ್ತು ಎಂ.ಜಿ.ಮುಳೆ, ಜೆಡಿಎಸ್‌ನಿಂದ ಟಿ.ಎನ್‌.ಜವರಾಯಿಗೌಡ ಅವರು ಆಯ್ಕೆ ಆಗಿರುವ ಅಭ್ಯರ್ಥಿಗಳು.

ADVERTISEMENT

ಹಾಲಿ ಸದಸ್ಯರ ಪೈಕಿ, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಉಳಿದಂತೆ, ವಿಧಾನಸಭೆ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ, ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ್ ಗುತ್ತೇದಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ್, ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಿಲ್ಕಿಸ್‌ ಬಾನು ಅವರಿಗೆ ಕಾಂಗ್ರೆಸ್‌ ಪರಿಷತ್ತಿಗೆ ಕಳುಹಿಸಿದೆ.

ಒಟ್ಟು 11 ಸ್ಥಾನಗಳಿಗೆ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ವಿಧಾನಸಭೆಯಲ್ಲಿನ ಸಂಖ್ಯಾಬಲಕ್ಕೆ ಅನುಗುಣವಾಗಿ ಕಾಂಗ್ರೆಸ್‌ಗೆ 7, ಬಿಜೆಪಿ 3 ಮತ್ತು ಜೆಡಿಎಸ್‌ಗೆ 1 ಸ್ಥಾನ ನಿಗದಿಯಾಗತ್ತು. ಕಾಂಗ್ರೆಸ್‌ನ ಆಸಿಫ್ ಪಾಷಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅವರಿಗೆ ಸೂಚಕರಿಲ್ಲದ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ 11 ಮಂದಿ ಮಾತ್ರ ಕಣದಲ್ಲಿ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.