ಬೆಂಗಳೂರು: ಕ್ಷೀರಭಾಗ್ಯ ಯೋಜನೆಯಲ್ಲಿ ನೀಡುವ ಹಾಲು ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಜನವರಿಯಿಂದ ವಿತರಣೆಯಾಗಿಲ್ಲ.
ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಗದಗ, ಉತ್ತರ ಕನ್ನಡ, ಬೀದರ್, ಯಾದಗಿರಿ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಮಕ್ಕಳಿಗೆ ಹಾಲು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಪ್ರತಿ ಕೆ.ಜಿ. ಹಾಲಿನ ಪುಡಿಗೆ ಸರ್ಕಾರ ₹ 275 ನಿಗದಿ ಮಾಡಿತ್ತು. ಬೆಲೆ ಹೆಚ್ಚಿಸಬೇಕು ಎಂಬ ಕೆಎಂಎಫ್‌ನ ಬೇಡಿಕೆಗೆ ಸ್ಪಂದಿಸಿದ್ದ ಸರ್ಕಾರ ₹ 25 ಹೆಚ್ಚಳ ಮಾಡಿತ್ತು. ಆದರೂ, ಶಾಲೆಗಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿಯನ್ನು ಸಿಹಿತಿಂಡಿಗಳು, ಐಸ್‌ಕ್ರೀಂ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಬಳಕೆ ಮಾಡಿಕೊಂಡಿದೆ ಎಂಬ ದೂರುಗಳೂ ಇವೆ.
‘ಸಿಹಿ ಪದಾರ್ಥಗಳ ತಯಾರಿಕೆಗೆ ಬಳಸಿಕೊಂಡಿಲ್ಲ. ಸ್ಥಳೀಯ ಮಟ್ಟದಲ್ಲಿ ಹಾಲು ಸಂಗ್ರಹಣೆಯ ಕೊರತೆಯಿದೆ. ದಿನಕ್ಕೆ ಸುಮಾರು 18 ಲಕ್ಷ ಲೀಟರ್‌ಗೆ ಬೇಡಿಕೆ ಇದೆ. 14 ಲಕ್ಷ ಲೀಟರ್ ಪೂರೈಸಲು ಸಾಧ್ಯವಾಗುತ್ತಿದೆ’ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
'ಬೆಲೆ ಏರಿಕೆಯ ನಂತರವೂ ನಿರೀಕ್ಷೆಗೆ ತಕ್ಕಂತೆ ಹಾಲು ಪೂರೈಕೆ ಯಾಗುತ್ತಿಲ್ಲ. ತಕ್ಷಣ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಆರ್.ವಿಶಾಲ್ ಪ್ರತಿಕ್ರಿಯಿಸಿದರು.
‘ಫೆಬ್ರುವರಿವರೆಗೆ ಶೇ 70ರಷ್ಟು ಬೇಡಿಕೆಯನ್ನು ಪೂರೈಸಿದ್ದೇವೆ. ಈಗ ಹಾಲಿನ ಸಂಗ್ರಹಣೆಯಲ್ಲಿ 2 ಲಕ್ಷ ಲೀಟರ್‌ಗಳಷ್ಟು ಹೆಚ್ಚಳವಾಗಿದೆ. ಸರಬರಾಜು ಮುಂದುವರಿಸುತ್ತೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.