ಮಡಿಕೇರಿ: ದೇಶದಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 81 ಹುಲಿಗಳು ಮೃತಪಟ್ಟಿವೆ. ಇವುಗಳಲ್ಲಿ ರಾಜ್ಯದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ 11 ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿಅಂಶಗಳು ಹೇಳುತ್ತವೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ 8 ಹುಲಿಗಳು ಮೃತಪಟ್ಟಿದ್ದವು.
ಇವುಗಳಲ್ಲಿ ಬಂಡೀಪುರದಲ್ಲಿ 4, ನಾಗರಹೊಳೆಯಲ್ಲಿ 3 ಹುಲಿಗಳು ಮೃತಪಟ್ಟಿವೆ. ಆದರೆ, ಕಳೆದ ವರ್ಷ 2023ರಲ್ಲಿ ರಾಜ್ಯದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ 12. 2021ರಲ್ಲಿ 15 ಹಾಗೂ 2022ರಲ್ಲಿ 19 ಹುಲಿಗಳು ಸಾವನ್ನಪ್ಪಿದ್ದವು.
ಹುಲಿಗಳ ಸಂಖ್ಯೆಯೂ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹುಲಿ ಗಣತಿ 2022ರ ಅಂಕಿಅಂಶದಂತೆ ರಾಜ್ಯದಲ್ಲಿ 564 ಹುಲಿಗಳು ಇವೆ. 2006ರಿಂದ ನಿರಂತರವಾಗಿ ಹುಲಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಕೊಡಗಿನ ಅರಣ್ಯದಲ್ಲೂ ಹುಲಿಗಳಿವೆ.
ದೇಶದಲ್ಲಿನ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಬಂಡೀಪುರ 2ನೇ ಸ್ಥಾನದಲ್ಲಿ, ನಾಗರಹೊಳೆ 3ನೇ ಸ್ಥಾನದಲ್ಲಿವೆ. ಕೊಡಗಿನ ಗಡಿಗೆ ಹೊಂದಿಕೊಂಡಂತಿರುವ ನಾಗರಹೊಳೆಯಲ್ಲಿ 134 ಹುಲಿಗಳು ಇದ್ದು, 100 ಚದರ ಕಿ.ಮೀಗೆ ಸರಾಸರಿ 11 ಹುಲಿಗಳು ಇವೆ ಎಂದು ಅಂದಾಜು ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹುಲಿ ಬೇಟೆ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವುದರಿಂದ ಸಹಜವಾಗಿಯೇ ಅವುಗಳ ಸಂತತಿ ವೃದ್ಧಿಸುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಸಂಖ್ಯೆ ಹೆಚ್ಚಾದಂತೆಲ್ಲ ಸಹಜವಾಗಿಯೇ ಅವುಗಳ ಸಾವಿನ ಸಂಖ್ಯೆಯೂ ಅಧಿಕವಾಗುತ್ತದೆ. ಇದರಲ್ಲಿ ಹುಲಿಗಳ ನಡುವಿನ ಸಂಘರ್ಷ, ಅನಾರೋಗ್ಯ, ವಯೋಸಹಜ ಕಾರಣಗಳು ಸೇರಿವೆ. ಆದರೆ, ಬೇಟೆ ಪ್ರಕರಣಗಳು ಇಲ್ಲ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷವರ್ಧನ್ ‘ಪ್ರಜಾವಾಣಿ’ಗೆ ತಿಳಿಸಿದರು. ಇಲ್ಲಿ ಒಟ್ಟು 54 ಬೇಟೆ ತಡೆ ಶಿಬಿರಗಳು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿವೆ.
ಹುಲಿ– ಮಾನವ ಸಂಘರ್ಷ ಹೆಚ್ಚಳ: ಸರಿಸುಮಾರು ಶತಮಾನಗಳ ಹಿಂದೆ ಈ ಸಂಖ್ಯೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಹುಲಿಗಳಿದ್ದವು. ಆದರೆ, ಆಗ ಮಾನವ– ಹುಲಿ ಮಧ್ಯೆ ಸಂಘರ್ಷ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಿ ಈ ಸಂಘರ್ಷ ಏರುಗತಿಯಲ್ಲಿರುವುದು ಆತಂಕದ ವಿಷಯ ಎನಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಹುಲಿ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದರೆ, ಈ ವರ್ಷ ಏಪ್ರಿಲ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶದ ಆಸುಪಾಸಿನಲ್ಲಿ, ಅರಣ್ಯಗಳ ಅಂಚಿನಲ್ಲಿ ಮಾನವ ಚಟುವಟಿಕೆಗಳು ಎಗ್ಗಿಲ್ಲದೇ ಹೆಚ್ಚಾಗುತ್ತಿರುವುದು ಇದಕ್ಕೆ ಬಹುಮುಖ್ಯ ಕಾರಣ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ಬಯಲು ಶೌಚಕ್ಕೆ ತೆರಳುವವರ ಮೇಲೆಯೇ ಹುಲಿಗಳು ಹಿಂದಿನಿಂದ ದಾಳಿ ನಡೆಸಿವೆ. ಅರಣ್ಯದಂಚಿನಲ್ಲಿ, ಇಲ್ಲವೇ ತೋಟಗಳಲ್ಲಿ ಮುಕ್ತವಾಗಿ ಬಿಟ್ಟ ಹಸು, ಕರುಗಳ ಮೇಲೆಯೆ ಅವು ದಾಳಿ ನಡೆಸಿವೆ. ಒಂದೆರಡು ಕಡೆ ಕೊಟ್ಟಿಗೆಯ ಮೇಲೆ ದಾಳಿ ನಡೆಸಿದ್ದರೂ ಆ ಕೊಟ್ಟಿಗೆಗಳಿಗೂ ಬಾಗಿಲು ಇಲ್ಲ. ಹಾಗಾಗಿ, ಹುಲಿಗಳ ದಾಳಿ ಹೆಚ್ಚಾಗಲು ಮನುಷ್ಯನ ಇಂತಹ ಅವೈಜ್ಞಾನಿಕವಾದ ಕಾರ್ಯಗಳೇ ಇಂಬು ನೀಡುತ್ತಿವೆ.
ಇದರೊಂದಿಗೆ ವಾಸಸ್ಥಳಕ್ಕಾಗಿ ಹುಲಿಗಳ ಮಧ್ಯೆ ನಡುವೆ ಸಂಘರ್ಷವೂ ಇದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹುಲಿಗಳು ಒಂದು ನಿರ್ದಿಷ್ಟವಾದ ಗಡಿಯೊಳಗೆ ವಾಸಿಸುತ್ತವೆ. ಈ ಗಡಿಯೊಳಗೆ ಮತ್ತೊಂದು ಹುಲಿಯನ್ನು ಬಿಟ್ಟುಕೊಳ್ಳುವುದಿಲ್ಲ. ಆದರೆ, ಹುಲಿಗೆ ವಯಸ್ಸಾದಂತೆ ಮತ್ತೊಂದು ಯುವ ಹುಲಿ ಆ ಜಾಗದಲ್ಲಿ ಪಾರಮ್ಯ ಸಾಧಿಸಲು ಹೊಂಚು ಹಾಕುತ್ತದೆ. ಆ ವೇಳೆ ಯುವ ಹುಲಿಗಳಿಗೂ ವಯಸ್ಸಾದ ಹುಲಿಗಳಿಗೂ ಸಂಘರ್ಷ ಏರ್ಪಟ್ಟು, ವಯಸ್ಸಾದ ಅಥವಾ ಗಾಯಗೊಂಡ ಹುಲಿಗಳು ತಮ್ಮ ಗಡಿಯಿಂದ ಹೊರಬರುತ್ತವೆ. ಆಗ ಸಹಜವಾಗಿಯೇ ಕಾಡಂಚಿನ ಪ್ರದೇಶಗಳಲ್ಲಿ ದನಕರುಗಳ ಮೇಲೆ ಅವು ದಾಳಿ ನಡೆಸುತ್ತವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ರಾಜ್ಯದಲ್ಲಿ ಜನವರಿ 2024ರಿಂದ ಜುಲೈ 28ರವರೆಗೆ ಹುಲಿ ಮೃತಪಟ್ಟ ಸ್ಥಳಗಳು
* ಜನವರಿ 10– ಪೊನ್ನಂಪೇಟೆ ವಲಯದ ಕಾನೂರು ಬೀಟ್‌ನ ಕೊಟ್ಟಗೇರಿಯ ಖಾಸಗಿ ಪ್ರದೇಶ
* ಜನವರಿ 29– ಮೈಸೂರು ವಿಮಾನನಿಲ್ದಾಣದ ಬಳಿ ಹುಲಿ ಮರಿ
* ಜನವರಿ 30– ಮದ್ದೂರು ವಲಯದ ಹುಲಿಕಟ್ಟೆ ಕಾಲುದಾರಿಯಲ್ಲಿ
* ಫೆ. 8– ಬಂಡೀಪುರದ ಮೊಳೆಯೂರು ವಲಯದ ನಾಡಾಡಿ ಬೀಟ್‌ನಲ್ಲಿ
* ಫೆ. 1– ಬಂಡೀಪುರದ ಮದ್ದೂರು ವಲಯದಲ್ಲಿ
* ಮಾರ್ಚ್ 22ರಂದು ನಾಗರಹೊಳೆಯ ಆನೆಚೌಕೂರು ವಲಯದ ಗಣಗೂರು ಬೀಟ್‌ನಲ್ಲಿ
* ಏಪ್ರಿಲ್ 21– ನಾಗರಹೊಳೆಯ ಆನೆಚೌಕೂರು ವಲಯದ ಗಣಗೂರು ಬೀಟ್‌ನಲ್ಲಿ
* ಮೇ 3– ಬಂಡೀಪುರದ ಬಿಕ್ಕಬರಗಿ ವಿಭಾಗದ ಹೆಬ್ಬಳ್ಳ ಬೀಟ್‌ನ ಚಾಮಲಾಪುರಕೆರೆ
* ಮೇ 14– ಬಂಡೀಪುರದ ಎನ್.ಬೇಗೂರು ವಲಯದ ಜಕ್ಕಳ್ಳಿ ಬೀಟ್‌ನ ಹುಣಸೇಮರದಲ್ಲಿ
* ಜೂನ್ 11– ನಾಗರಹೊಳೆಯ ಆನೆಚೌಕೂರು ವಲಯದ ಹುಣಸೂರು ವನ್ಯಜೀವಿ ವಲಯದಲ್ಲಿ
* ಜೂನ್ 21– ಬಿಳಿಗಿರಿರಂಗನಬೆಟ್ಟದ ಲೊಕ್ಕನಹಳ್ಳಿ ಪಶ್ಚಿಮ ಬೀಟ್‌ನಲ್ಲಿ (ಆಧಾರ– ಎನ್‌ಟಿಸಿಎ)
ದೇಶದಲ್ಲಿ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ 3ನೇ ಸ್ಥಾನದಲ್ಲಿದೆ. ಇಲ್ಲಿ ಹುಲಿ ಬೇಟೆ ಇಲ್ಲ. ಬೇಟೆ ತಡೆ ಶಿಬಿರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.-ಹರ್ಷವರ್ಧನ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ.
ಮಡಿಕೇರಿ ವಲಯದಲ್ಲಿ ಹುಲಿ ಸಾವು ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ಸಂಭವಿಸಿಲ್ಲ. ಜನರು ಹುಲಿ ಕುರಿತು ಅನಗತ್ಯವಾಗಿ ಪ್ಯಾನಿಕ್‌ಗೆ ಒಳಗಾಗಬಾರದು. ಹುಲಿ ಹೆಜ್ಜೆಗುರುತು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು.-ಭಾಸ್ಕರ್, ಮಡಿಕೇರಿ ವನ್ಯಜೀವಿ ವಲಯದ ಡಿಸಿಎಫ್.
ಹುಲಿಗಳ ಸಾಂದ್ರತೆ ಹೆಚ್ಚಳವೊಂದೇ ಹುಲಿ– ಮಾನವ ಸಂಘರ್ಷಕ್ಕೆ ಕಾರಣವಲ್ಲ. ಇದಕ್ಕಿಂತಲೂ ಹುಲಿಗಳ ಆವಾಸಸ್ಥಾನದಲ್ಲಿ ಅದರ ಆಸುಪಾಸಿನಲ್ಲಿ ಮಾನವನ ಅವೈಜ್ಞಾನಿಕ ಚಟುವಟಿಕೆಗಳ ಹೆಚ್ಚಳವೂ ಕಾರಣವಾಗಿದೆ.-ಜಗನ್ನಾಥ್, ವಿರಾಜಪೇಟೆ ವಲಯದ ಡಿಸಿಎಫ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.