ADVERTISEMENT

ಭಿಕ್ಷಾಟನೆ: 115 ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 16:32 IST
Last Updated 21 ಸೆಪ್ಟೆಂಬರ್ 2023, 16:32 IST
<div class="paragraphs"><p>FIR</p></div>

FIR

   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಬದಿ ಮತ್ತು ಸಂಚಾರಿ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಹಾಗೂ ಆಟಿಕೆಗಳನ್ನು ಮಾರಾಟ ಮಾಡಲು ಮಕ್ಕಳನ್ನು ಬಳಕೆ ಮಾಡಿದವರ ವಿರುದ್ಧ ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ 115 ಎಫ್‌ಐಆರ್ ದಾಖಲು ಮಾಡಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ, ‘ಲೆಟ್ಸ್‌ ಕಿಟ್ ಫೌಂಡೇಷನ್‘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ‘2021ರಿಂದ ಈತನಕ 115 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು 99 ಮಕ್ಕಳನ್ನು ಸಂರಕ್ಷಿಸಲಾಗಿದೆ‘ ಎಂದು ತಿಳಿಸಿದರು.

144 ಬಂಧನ: ‘ಭಿಕ್ಷಾಟನೆ ಮಾಡುತ್ತಿದ್ದ 37 ಪುರುಷರು, 74 ಮಹಿಳೆಯರು, 54 ಬಾಲಕರು ಹಾಗೂ 45 ಬಾಲಕಿಯರೂ ಸೇರಿದಂತೆ ಒಟ್ಟು 210 ಜನರನ್ನು ಸಂರಕ್ಷಿಸಲಾಗಿದೆ. 115 ಎಫ್‌ಐಆರ್‌ ದಾಖಲಿಸಿ 82 ಪುರುಷರು ಹಾಗೂ 62 ಮಹಿಳೆಯರು ಸೇರಿದಂತೆ 144 ಮಂದಿಯನ್ನು ಬಂಧಿಸಲಾಗಿದೆ‘ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಮನವಿ: ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಭಿಕ್ಷುಕರ ಸಂರಕ್ಷಣೆಗಾಗಿ ಸಂಗ್ರಹಿಸಲಾದ ₹ 55.65 ಕೋಟಿ ಸೆಸ್‌ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಲು ಆರು ತಿಂಗಳ ಕಾಲಾವಕಾಶ ನೀಡಬೇಕು‘ ಎಂದು ಮನವಿ ಮಾಡಿದರು.

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ಬಾಕಿ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಬೇಕು‘ ಎಂದು ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಬೆಂಗಳೂರಿನ ಬೀದಿಗಳಲ್ಲಿ ಪ್ರಮುಖವಾಗಿ ಸಂಚಾರಿ ಸಿಗ್ನಲ್‌ಗಳಲ್ಲಿ ಪೆನ್, ಆಟಿಕೆಗಳು, ಇಯರ್ ಬಡ್ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬಾಲ ನ್ಯಾಯ ಕಾಯ್ದೆ ಹಾಗೂ ಸಂವಿಧಾನದ 21ನೇ ವಿಧಿಯ ಉಲ್ಲಂಘನೆ. ಆದ್ದರಿಂದ, ಮಕ್ಕಳನ್ನು ಮಾರಾಟದ ಕೆಲಸಕ್ಕೆ ಬಳಸಿಕೊಳ್ಳದಂತೆ ಹಾಗೂ ಅವರನ್ನು ಶಾಲೆಗಳಿಗೆ ದಾಖಲಿಸಲು ಅಗತ್ಯ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಬೇಕು‘ ಎಂಬುದು ಅರ್ಜಿದಾರರ ಕೋರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.