ADVERTISEMENT

ಕರ್ನಾಟಕ ವಿದ್ಯಾವರ್ಧಕ ಸಂಘ: 12 ಲೇಖಕಿಯರಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 5:51 IST
Last Updated 8 ಫೆಬ್ರುವರಿ 2023, 5:51 IST
12 ಲೇಖಕಿಯರಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
12 ಲೇಖಕಿಯರಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ   

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಿಳಾ ಸಾಹಿತ್ಯಕ್ಕೆ ನೀಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವು ನಾಲ್ಕು ವರ್ಷಗಳ ಅವಧಿಗೆ 12 ಲೇಖಕಿಯರಿಗೆ ಲಭಿಸಿದೆ.

2018ರಿಂದ 2021ರವರೆಗೆ ಒಟ್ಟು 115 ಕೃತಿಗಳು ಆಯ್ಕೆಯಾಗಿ ಬಂದಿದ್ದವು. ನಿರ್ಣಾಯಕರು ಪ್ರತಿ ಸಾಲಿನಲ್ಲಿ ಮೂರು ಕೃತಿಗಳಂತೆ ಆಯ್ಕೆ ಮಾಡಿ ಒಟ್ಟು 12 ಕೃತಿಗಳಿಗೆ ಬಹುಮಾನ ನೀಡಿದ್ದಾರೆ.

2018ನೇ ಸಾಲಿನಲ್ಲಿ ಬೆಂಗಳೂರಿನ ಉಮಾ ಮುಕುಂದ ಅವರ ‘ಕಡೆ ನಾಲ್ಕು ಸಾಲು’ ಕವನ ಸಂಕಲನ, ಕೊಪ್ಪದ ದೀಪಾ ಹಿರೇಗುತ್ತಿ ಅವರ ‘ಫಿನಿಕ್ಸ್‌... ಸೋಲಿಸಬಹುದು ಸೋಲನ್ನೆ’ ಅಂಕಣ ಬರಹಗಳ ಸಂಗ್ರಹ, ಚನ್ನಮ್ಮನ ಕಿತ್ತೂರಿನ ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಕವನ ಸಂಕಲನ.

ADVERTISEMENT

2019ನೇ ಸಾಲಿನಲ್ಲಿ ಬೆಂಗಳೂರಿನ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ ಕೃಷಿ ಮಹಿಳೆಯರ ಅನುಭವ ಕಥನ’, ಭದ್ರತಾವತಿಯ ದೀಪ್ತಿ ಭದ್ರಾವತಿ ಅವರ ‘ಗೀರು ಕಥಾ ಸಂಕಲನ’ ಹಾಗೂ ಧಾರವಾಡದ ಶಾಂತಲಾ ಯೋಗೀಶ ಯಡ್ರಾವಿ ಅವರ ‘ವಿಶ್ವಜಿತ’ ಕಾದರಂಬರಿ.

2020ನೇ ಸಾಲಿನ ಹುಬ್ಬಳ್ಳಿಯ ರೂಪಾ ರವೀಂದ್ರ ಜೋಶಿ ಅವರ ‘ಶ್ರಂಖಲಾ’ ಕಾದರಂಬರಿ, ಮಂಗಳೂರಿನ ಜಯಶ್ರೀ ಬಿ. ಕದ್ರಿ ಅವರ ‘ಬೆಳಕು ಬಳ್ಳಿ ಜೀವನ ಪ್ರೀತಿ’ ಬರಹಗಳು, ಕಾರವಾರದ ಶ್ರೀದೇವಿ ಕೆರೆಮನಿ ಅವರ ‘ಅಂಗೈಯೊಳಗಿನ ಬೆಳಕು’ ಅಂಕಣ ಬರಹಗಳು.

2021ನೇ ಸಾಲಿನಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕಥೆಗಳು, ಬೆಂಗಳೂರಿನ ಪೂರ್ಣಿಮಾ ಮಾಳಗಿಮನಿ ಅವರ ‘ಇಜಯಾ’ ಕಾದರಂಬರಿ, ಮೈಸೂರಿನ ಡಾ. ಸುಜಾತಾ ಅಕ್ಕಿ ಅವರ ’ಆಕಾಶದ ಕೀಲಿ’ ನಾಟಕಕ್ಕೆ ಬಹುಮಾನ ಲಭಿಸಿದೆ.

ಮಾರ್ಚ್ 4 ಹಾಗೂ 5ರಂದು ಸಂಘವು ಆಯೋಜಿಸುತ್ತಿರುವ ಮಹಿಳಾ ಲೇಖಕಿಯರ ಸಮಾವೇಶದಲ್ಲಿ ಬಹುಮಾನ ನೀಡಲಾಗುವುದು. ಪ್ರತಿ ಕೃತಿಗೆ ₹10ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.