ADVERTISEMENT

ಅಭಿವೃದ್ಧಿಗೆ ₹1.20 ಲಕ್ಷ ಕೋಟಿ ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಅಭಿವೃದ್ಧಿ ಮಾಡದೇ ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹1.20 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಉತ್ತರ ಕೊಡಲು ಆರಂಭಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ‘ಪಾಕಿಸ್ತಾನ್ ಜಿಂದಾಬಾದ್‌ ಎಂದು ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ’ ಎಂದು ಧರಣಿ ನಡೆಸಿದರು. ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಬೈಯುತ್ತಲೇ ತಮ್ಮ ಭಾಷಣವನ್ನು ಸಿದ್ದರಾಮಯ್ಯ ಮುಂದುವರಿಸುತ್ತಿದ್ದಂತೆ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

‘ನಡೀರಿ ನಡೀರಿ’ ಎಂದು ವಿರೋಧ ಪಕ್ಷದವರನ್ನು ಹಂಗಿಸಿದ ಮುಖ್ಯಮಂತ್ರಿ, ರಾಜ್ಯದ ತೆರಿಗೆ ಸಂಗ್ರಹ, ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು, ಅಭಿವೃದ್ಧಿ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದ ಅನುದಾನಗಳ ಅಂಕಿ ಅಂಶಗಳನ್ನು ಸದನದ ಮುಂದಿಟ್ಟರು. ‘ಕೇಂದ್ರಸರ್ಕಾರ ಏಳು ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ. ಅದನ್ನು ಇಲ್ಲಿನ ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌
ಗಳು ಸಮರ್ಥಿಸುತ್ತಿವೆ’ ಎಂದು ಹೇಳಿದ ಅವರು, ಏಳು ಕೋಟಿ ಕನ್ನಡಿಗರಿಗೆ ಎರಡೂ ಪಕ್ಷಗಳು ದ್ರೋಹ ಎಸಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘2023ರ ಫೆಬ್ರುವರಿಯಲ್ಲಿ ಬಸವರಾಜ ಬೊಮ್ಮಾಯಿಯವರು ₹3.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಸಾಲಿನಲ್ಲಿ ನಾನು ₹3.71 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದೇನೆ. ಬೊಮ್ಮಾಯಿ ಬಜೆಟ್‌ಗಿಂತ ₹62 ಸಾವಿರ ಕೋಟಿಯಷ್ಟು ಬಜೆಟ್ ಗಾತ್ರ ಹಿಗ್ಗಿದೆ. ಬೊಮ್ಮಾಯಿ ಬಜೆಟ್ ಮಂಡಿಸಿದಾಗ ರಾಜ್ಯದ ಜಿಡಿಪಿ ₹25,63,247 ಕೋಟಿ ಇತ್ತು. ಇದು 2024-25 ಕ್ಕೆ ₹28,09,063 ಕೋಟಿ ಆಗುವ ನಿರೀಕ್ಷೆ ಇದೆ. ಅಂದರೆ ₹2,41,723 ಕೋಟಿಯಷ್ಟು ಹೆಚ್ಚಲಿದೆ. ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡದೇ ಇದ್ದರೆ ಬಜೆಟ್ ಗಾತ್ರ ಹಾಗೂ ಜಿಡಿಪಿ ಇಷ್ಟು ಬೃಹತ್ ಮೊತ್ತದಲ್ಲಿ ಹೆಚ್ಚಳ
ವಾಗುವ ಸಾಧ್ಯತೆ ಇತ್ತೇ’ ಎಂದೂ ಪ್ರಶ್ನಿಸಿದರು.

ಜೈ ಸೀತಾರಾಮ್‌ ಎಂದ ಸಿ.ಎಂ
ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವ ವೇಳೆ ಸಿದ್ದರಾಮಯ್ಯ ಅವರು ‘ಜೈ ಸೀತಾರಾಮ್‌ ಜೈ ಸೀತಾರಾಮ್‌’ ಎಂದು ಘೋಷಣೆ ಕೂಗಿದರು. ಮುಖ್ಯಮಂತ್ರಿ ಉತ್ತರ ಕೊಡಲು ಆರಂಭಿಸುತ್ತಿದ್ದಂತೆ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಸಚಿವಾಲಯದ ಸಿಬ್ಬಂದಿ ಕುಳಿತುಕೊಳ್ಳುವ ಮೇಜಿನ ಸುತ್ತ ‘ಭಜನೆ’ ಮಾಡುವ ರೀತಿಯಲ್ಲಿ ಎಡದಿಂದ ಬಲಕ್ಕೆ ಸುತ್ತು ಹೊಡೆಯುತ್ತಿದ್ದರು. ‘ಕಟ್ಟಿ ಕಟ್ಟಿ ಕಾಂಗ್ರೆಸ್‌ಗೆ ಚಟ್ಟ ಕಟ್ಟಿ, ಸತ್ತೋಯ್ತು ಸತ್ತೋಯ್ತು ಕಾಂಗ್ರೆಸ್ ಸತ್ತೋಯ್ತು’ ಎಂದು ಘೋಷಣೆ ಹಾಕುತ್ತಿದ್ದರು. ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಟೀಕಿಸಲು ಆರಂಭಿಸುತ್ತಿದ್ದಂತೆಯೇ ಜೈ ಶ್ರೀರಾಮ್‌, ಜೈ ಮೋದಿ ಎಂದು ಘೋಷಣೆ ಕೂಗಲು ಬಿಜೆಪಿಯವರು ಶುರು ಮಾಡಿದರು.
ಸರ್ಕಾರ ವಜಾಗೊಳಿಸಿ: ಬಿಜೆಪಿ ಮನವಿ
‘ವಿಧಾನಸೌಧದಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೇಶ ವಿರೋಧಿಗಳಿಗೆ ರಕ್ಷಣೆ ನೀಡುತ್ತಿರುವ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು’ ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಲು ಸಿದ್ದರಾಮಯ್ಯ ಆರಂಭಿಸುತ್ತಿದ್ದಂತೆ ‘ಸುಳ್ಳೇ ಸುಳ್ಳು, ಏನಿಲ್ಲ ಏನಿಲ್ಲ ಈ ಬಜೆಟ್‌ನಲ್ಲಿ ಏನಿಲ್ಲ’ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆ ಬಳಿಕ ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದರು. ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ ಮತ್ತು ಇತರ ಶಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.