ADVERTISEMENT

ಕೇಂದ್ರದ ನಿಗದಿಗಿಂತ 12.22 ಲಕ್ಷ ಹೆಚ್ಚುವರಿ BPL ಕಾರ್ಡ್‌ ಹಂಚಿಕೆ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:48 IST
Last Updated 21 ಅಕ್ಟೋಬರ್ 2024, 15:48 IST
ಕೆ.ಎಚ್. ಮುನಿಯಪ್ಪ
ಕೆ.ಎಚ್. ಮುನಿಯಪ್ಪ   

ಬೆಂಗಳೂರು: ಕೇಂದ್ರ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ 12.22 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳನ್ನು ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಈ ಪಡಿತರ ಚೀಟಿಗಳ 33.40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನವೆಂಬರ್‌ನಿಂದ ರಾಜ್ಯ ಸರ್ಕಾರವೇ ಅಕ್ಕಿ ಖರೀದಿಸಿ ವಿತರಿಸಲಿದೆ.

ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ‘ಕೇಂದ್ರ ಸರ್ಕಾರ 10.68 ಲಕ್ಷ ಅಂತ್ಯೋದಯ ಮತ್ತು 1.02 ಕೋಟಿ ಬಿಪಿಎಲ್‌ ಕಾರ್ಡ್‌ ಸೇರಿ 1.13 ಕೋಟಿಗೂ ಹೆಚ್ಚು ಪಡಿತರಚೀಟಿಗಳ ಒಟ್ಟು 4.01 ಕೋಟಿ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ತಲಾ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ’ ಎಂದರು.

‘ಹೆಚ್ಚುವರಿ ಕಾರ್ಡ್‌ಗಳಿಗೆ ಅಗತ್ಯವಾದ 20 ಸಾವಿರ ಟನ್‌ ಅಕ್ಕಿಯನ್ನು ಕೇಂದ್ರ ಸರ್ಕಾರದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌) ಕೆ.ಜಿಗೆ ₹ 28 ದರದಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕ ಖರೀದಿಸಿ ನವೆಂಬರ್‌ ತಿಂಗಳಿನಿಂದ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

ಡಿಬಿಟಿ ಮುಂದುವರಿಕೆ: ‘ಅನ್ನಭಾಗ್ಯ’ ಯೋಜನೆಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಜುಲೈ 2023ರಿಂದ ಇದೇ ಜುಲೈವರೆಗೆ ₹ 8,433.11 ಕೋಟಿಯನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ ಹಣವನ್ನು ಈ ತಿಂಗಳ ಅಂತ್ಯದೊಳಗೆ ಜಮೆ ಮಾಡಲಾಗುವುದು’ ಎಂದರು.

ಆಹಾರ ಇಲಾಖೆ ಕಾರ್ಯದರ್ಶಿ ಟಿ.ಎಂ.ಎಚ್‌. ಕುಮಾರ್‌, ಆಯುಕ್ತರಾದ ವಾಸಿರೆಡ್ಡಿ ಜೋತ್ಸ್ನಾ, ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ್‌, ಕಾನೂನು ಮಾಪನಶಾಸ್ತ್ರ ಇಲಾಖೆ ನಿಯಂತ್ರಕಿ ಅನಿತಾ ಲಕ್ಷ್ಮೀ ಇದ್ದರು.

ಐ.ಟಿ ಪಾವತಿಸುವ 1.02 ಲಕ್ಷ ಕುಟುಂಬ ಬಿಪಿಎಲ್‌!

‘ಆದಾಯ ತೆರಿಗೆ ಪಾವತಿಸುವ 98458 ಕುಟುಂಬಗಳು 4036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘಿಸಿರುವ ಕಾರ್ಡ್‌ದಾರರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವ ಮುನಿಯಪ್ಪ ಹೇಳಿದರು. ‘ಆರು ತಿಂಗಳಿನಿಂದ ಪಡಿತರ ಪಡೆಯದ 2.75 ಲಕ್ಷ ಪಡಿತರ ಚೀಟಿ ಆದಾಯ ಮಿತಿ ಹೆಚ್ಚು ಇರುವ 1009479 ಕುಟುಂಬಗಳೂ ಸೇರಿದಂತೆ ಒಟ್ಟು 1387639 ಕಾರ್ಡ್‌ಗಳು ಅನರ್ಹವೆಂದು ಗುರುತಿಸಲಾಗಿದೆ. ಈ ಪೈಕಿ 3.63 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. 10.38 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ರದ್ದುಪಡಿಸಲು ಬಾಕಿ ಇವೆ. ಹೀಗೆ ಒಟ್ಟು 18.70 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಬಿಪಿಎಲ್‌ನಿಂದ ಹೊರ ಹೋಗಲಿದ್ದಾರೆ  ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.