ಬೆಂಗಳೂರು: ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ಲಕ್ಷ ಮಂದಿಗೆ 113 ಪುರುಷರು ಮತ್ತು 139 ಮಹಿಳೆಯರು ಕ್ಯಾನ್ಸರ್ ಪೀಡಿತ ರಾಗಿದ್ದಾರೆ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ಹೆಚ್ಚಾಗಿ ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇಲಾಖೆಯು ಭಾನುವಾರ ಬೆಳಿಗ್ಗೆ 8.30ಕ್ಕೆ ವಿಧಾನಸೌಧದ ಮುಂಭಾಗದಿಂದ ಮಾಗಡಿ ರಸ್ತೆ ಯಲ್ಲಿರುವ ಆರೋಗ್ಯ ಸೌಧದವರೆಗೂ ಸೈಕಲ್ ಜಾಥಾ ಹಮ್ಮಿಕೊಂಡಿದೆ.
‘ರಾಜ್ಯದಲ್ಲಿ ಸ್ಥೂಲಕಾಯತೆಯ ಪ್ರಮಾಣ ಪುರುಷರಲ್ಲಿ ಶೇ 17ರಷ್ಟು ಇದ್ದರೆ, ಮಹಿಳೆಯರಲ್ಲಿ ಶೇ 33ರಷ್ಟಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಿದ್ದು, ಶೇ 79.4ರಷ್ಟು ಪ್ರಕರಣಗಳು ಸ್ತನ ಕ್ಯಾನ್ಸರ್ ಆಗಿವೆ. ನಂತರದ ಸ್ಥಾನದಲ್ಲಿ ಗರ್ಭಕಂಠ ಕ್ಯಾನ್ಸರ್ (ಶೇ 10.8ರಷ್ಟು) ಇದೆ. ಹೃದಯ ರಕ್ತನಾಳದ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ಸಮಸ್ಯೆ ಮತ್ತು ಮಧುಮೇಹ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದೆ. ಅಪೌಷ್ಟಿಕ ಆಹಾರ ಸೇವನೆ, ದೈಹಿಕ ನಿಷ್ಕ್ರಿಯತೆ ಸೇರಿ ವಿವಿಧ ಕಾರಣಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಒಳಪಡುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.
‘ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಸೇರಿ ವಿವಿಧ ಕ್ರಮಗಳ ಮೂಲಕ ಮಹಿಳೆಯರು ಆರೋಗ್ಯ ವೃದ್ಧಿಗೆ ಆದ್ಯತೆ ನೀಡಬೇಕು. ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮದ ಅಡಿ 30 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷದ ಎಲ್ಲಾ ವ್ಯಕ್ತಿಗಳಿಗೆ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಡಿ ಬಾಯಿ, ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ತಪಾಸಣೆಗೆ ಆದ್ಯತೆ ನೀಡಲಾಗಿದೆ’ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.