ADVERTISEMENT

ನಾಳೆ‌ ರಾತ್ರಿ 9 ಗಂಟೆಯಿಂದ ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 10:01 IST
Last Updated 26 ಏಪ್ರಿಲ್ 2021, 10:01 IST
ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಸೋಂಕಿನಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ನಾಳೆ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮೇ10ರ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಈ ಅವಧಿಯಲ್ಲಿ ಬೆಳಿಗ್ಗೆ 6ರಿಂದ 10ಗಂಟೆವರೆಗೆ ದಿನಸಿ, ಹಾಲು ಮತ್ತು ತರಕಾರಿ ಸೇರಿದಂತೆಅಗತ್ಯ ವಸ್ತುಗಳನ್ನು ಖರೀದಿಸಲು ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ಕ್ಕೆ ಎಲ್ಲರೂ ವ್ಯಾಪಾರ ಸ್ಥಗಿತಗೊಳಿಸಬೇಕು. ಪೊಲೀಸರು ಬಲ ಪ್ರಯೋಗಿಸಲು ಅವಕಾಶ ನೀಡಬಾರದು. ಎಲ್ಲವೂ ಬಂದ್ ಇರುತ್ತದೆ. ಸಾರ್ವಜನಿಕರು ಮನೆ ಬಿಟ್ಟು ಹೊರಬರಬಾರದು. ಮುಖ್ಯ ಕಾರ್ಯದರ್ಶಿ ಈ ಸಂಬಂಧ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

18 ರಿಂದ 45 ವರ್ಷ ವಯಸ್ಸಿನ ನಾಗರಿಕರಿಗೆಉಚಿತ ಲಸಿಕೆ ನೀಡಲು ನಿರ್ಧರಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಸರ್ಕಾರಿ ಸಾರಿಗೆ ಬಸ್‌ಗಳು ಸೇರಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಮೆಟ್ರೋ ರೈಲು ಸಂಚಾರ ಬಂದ್ ಆಗಲಿದೆ. ಜವಳಿ, ಕಟ್ಟಡ ನಿರ್ಮಾಣ, ಕೃಷಿ ಬಿಟ್ಟು ಬೇರೆಲ್ಲ ಚಟುವಟಿಕೆ ಬಂದ್ ಆಗಲಿವೆ. ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಉದ್ಯಮಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ.

ಇದೇವೇಳೆ, ಕೇಂದ್ರದಿಂದ 800 ಟನ್ ಆಕ್ಸಿಜನ್ ಪೂರೈಕೆ ಆರಂಭವಾಗಿದೆ. ಆಕ್ಸಿಜನ್ ಕೊರತೆ ಸಮಸ್ಯೆ ಬಗೆಹರಿಯುತ್ತದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದಿಲ್ಲ. 1ಲಕ್ಷ ರೆಮಿಡಿಸಿವಿರ್ ಚುಚ್ಚುಮದ್ದು ರಾಜ್ಯಕ್ಕೆ ಬರಲಿದೆಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.

ಬೆಂಗಳೂರಿನ ಪರಿಸ್ಥಿತಿ ಮಹಾರಾಷ್ಟ್ರವನ್ನೂ ಮೀರಿಸುವಂತೆ ಸಾಗುತ್ತಿದೆ. ಸಂಪುಟದ ಸಹೋದ್ಯೋಗಿಗಳು ಮತ್ತು ತಜ್ಞರ ಸಲಹೆಯಂತೆ ಸಂಪೂರ್ಣ ಕರ್ಫ್ಯೂವಿಧಿಸಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಕಸಾಪ ಚುನಾವಣೆ ಸೇರಿ ಎಲ್ಲಾ ಚುನಾವಣೆ 6 ತಿಂಗಳು ಮುಂದೂಡಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.