ಆಳಂದ/ಹೊಸಪೇಟೆ: ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕಿನ ಶಿರವಾಳ ವಾಡಿ ಹಾಗೂ ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.
ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ರೈಲ್ವೆ ಸೇತುವೆ ಸಮೀಪ ಮಧ್ಯಾಹ್ನ ಟ್ರಕ್ ಮತ್ತು ಎರಡು ಆಟೊಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಳ್ಳಾರಿಯ ಒಂದೇ ಕುಟುಂಬದ ಐವರು ಸಹಿತ ಎಂಟು ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.
ಬಳ್ಳಾರಿಯ ಕೌಲ್ ಬಜಾರ್ ನಗರದ ನಿವಾಸಿಗಳಾದ ಸಫ್ರಾಬೀ (55), ಕೌಸರ್ ಬಾನು (35), ಇಬ್ರಾಹಿಂ (33), ಯಾಸ್ಮೀನ್ (45), ಜಹೀರ್ (16), ಶಾನು (30) ಆಟೊ ಚಾಲಕ ಬಳ್ಳಾರಿ ಬಂಡಿಹಟ್ಟಿಯ ಉಮೇಶ್ (27) ಮತ್ತು ಇನ್ನೊಂದು ಆಟೊದಲ್ಲಿದ್ದ ಬಳ್ಳಾರಿ ಅಂದ್ರಾಳ್ ಡಿ.ಸಿ.ಕ್ಯಾಂಪ್‌ನ ಸಲೀಮಾ ಯಾನೆ ಶ್ಯಾಮ್ (40) ಮೃತರು.
‘ಗಾಯಗೊಂಡವರ ಪೈಕಿ ನಾಲ್ವರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಟ್ರಕ್ ಚಾಲಕ ಓದೇಶ (24) ಎಂಬಾತನನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಬಳ್ಳಾರಿ ವಲಯದ ಐಜಿಪಿ ಬಿ.ಎಸ್. ಲೋಕೇಶ್ ಕುಮಾರ್ ತಿಳಿಸಿದರು.
ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕು ಶಿರವಾಳ ವಾಡಿ ಸಮೀಪ ಕ್ರೂಸರ್ ಮತ್ತು ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿ ಬಾಲಕ ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಳಂದ ತಾಲ್ಲೂಕಿನ ಅಣ್ಣೂರು ಗ್ರಾಮದ ನಿವಾಸಿಗಳಾದ ಲಲಿತಾ ಮಹಾದೇವ ಬುಗ್ಗೆ(50), ರೋಹಿಣಿ ಗೋಪಾಲ್ ಪೂಜಾರಿ(40), ಸುಂದರಬಾಯಿ ಭರತ್ ಸಿಂಗ್ ರಜಪೂತ್(55), ಡಿಗ್ಗಿ ನಿವಾಸಿ ಸಾಯಿನಾಥ್ ಗೋವಿಂದ ಪೂಜಾರಿ(10) ಹಾಗೂ ಮಹಾರಾಷ್ಟ್ರದ ಬೇಡ್ಗ ಗ್ರಾಮದ ಸಂಗೀತಾ ಮದನ್ ಮನೆ(35), ಇಂದಾಪುರ ನಿವಾಸಿ ಛಾಯಾ ಹನುಮಾನ್(38)
ಮೃತರು.
ಬೇರೆ ಬೇರೆ ಊರಿನ ಸಂಬಂಧಿಗಳು ಸೇರಿ ಅಫಜಲಪುರ ತಾಲ್ಲೂಕಿನ ಘತ್ತರಗಿ ಭಾಗವಂತಿ ದೇವಿಯ ದರ್ಶನ ಮಾಡಿದರು. ಬಳಿಕ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಹಾರಾಜರ ದೇವಸ್ಥಾನಕ್ಕೆ ತೆರಳಿದ್ದರು. ವಾಪಸ್ ಬರುವಾಗ ಶಿರವಾಳ ವಾಡಿ ಸಮೀಪ ಕ್ರೂಸರ್ ಮತ್ತು ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ. ಕ್ರೂಸರ್‌ನಲ್ಲಿದ್ದ 16 ಮಂದಿ ಪೈಕಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. 10 ಮಂದಿ ಗಾಯಾಳುಗಳನ್ನು ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.