ಮೂಡುಬಿದಿರೆ: ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿದ 15 ಮಂದಿ ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಡಿಸೆಂಬರ್‌ನಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಗಳ ರಾಷ್ಟ್ರೀಯ ಸಮ್ಮೇಳನದ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ' ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ₹25ಸಾವಿರ ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿಸೆಂಬರ್ 3ರಂದು ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ 2017ರ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪುರಸ್ಕೃತರು: ಬಳ್ಳಾರಿ ಪ್ರಾಂತ್ರ್ಯದ ಧರ್ಮಾಧ್ಯಕ್ಷರಾಗಿರುವ ಬಿಷಪ್ ಹೆನ್ರಿ ಡಿ'ಸೋಜ, ಸಾಮಾಜಿಕ ನ್ಯಾಯದ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸಂಶೋಧಕ ಧಾರವಾಡದ ಪ್ರೊ.ತೇಜಸ್ವಿ ಕಟ್ಟೀಮನಿ, ವಿಮರ್ಶಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಮಹಿಳಾಪರ ಹೋರಾಟಗಾರ್ತಿ ಡಾ.ವಿಜಯಾ ದಬ್ಬೆ, ತುಮಕೂರಿನ ಕವಿ ಪ್ರೊ.ಕೆ.ಬಿ.ಸಿದ್ದಯ್ಯ, ಕಾದಂಬರಿಕಾರ ಮೈಸೂರು ಹೆಬ್ಬಾಳದ ಪ್ರೊ.ಜಿ.ಎಚ್ ಹನ್ನೆರಡುಮಠ, ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರರಾವ್, ಯಕ್ಷಗಾನ ವಿಮರ್ಶಕ ಕಾರ್ಕಳ ಮಾಳದ ಡಾ. ಎಂ. ಪ್ರಭಾಕರ ಜೋಶಿ, ತೂಗು ಸೇತುವೆಗಳ ಸರದಾರ ಖ್ಯಾತಿಯ ಗಿರೀಶ್ ಭಾರದ್ವಾಜ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಸುಗಮ ಸಂಗೀತ ಕ್ಷೇತ್ರದ ಕಲಾವಿದೆ ರತ್ನಮಾಲಾ ಪ್ರಕಾಶ್, ನಾಟಕಕಾರ ಮುಂಬಯಿ ಕನ್ನಡಿಗ ಡಾ.ತೋನ್ಸೆ ವಿಜಯ್‌ಕುಮಾರ್ ಶೆಟ್ಟಿ ಮತ್ತು ರಥಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಇವರು 2017ನೇ ಸಾಲಿನ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.