ADVERTISEMENT

ಅನಧಿಕೃತ ಬಡಾವಣೆಗೆ ಅನುಮೋದನೆ ನೀಡಿದ 15 ಪಿಡಿಒ ಅಮಾನತು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 15:30 IST
Last Updated 6 ನವೆಂಬರ್ 2019, 15:30 IST

ಬೆಳಗಾವಿ: ಅನಧಿಕೃತ ಬಡಾವಣೆಗಳಿಗೆ ಅನುಮೋದನೆ ನೀಡಿದ್ದ ಜಿಲ್ಲೆಯ 15 ಜನ ಪಿಡಿಒಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೆ.ವಿ. ಅಮಾನತುಗೊಳಿಸಿದ್ದಾರೆ.

ರೇಷ್ಮಾ ಪಾನೆವಾಲಿ, ಸುಮಿತ್ರಾ ಮಿರ್ಜಿ, ವಿಜಯಲಕ್ಷ್ಮಿ ತೆಗ್ಗಿ, ಕಲ್ಯಾಣಿ ಚೌಗಲಾ, ಲೀಲಾ ಮೇತ್ರಿ, ರೇವತಿ ಸಿಂಗೆ, ಲೀಲಾ ಕರಿಲಿಂಗಣ್ಣವರ, ಜಿ.ಐ. ಬರಗಿ, ಹನಮಂತ ಪೋಳ, ರಂಜಿತಸಿಂಗ್‌ ರಜಪೂತ, ಗಂಗಾಧರ, ಬಾಳಾರಾಮ ಭಜಂತ್ರಿ, ವಿಲಾಸ್‌ರಾಜ್‌, ವೀಣಾ ಹಲವಾಯಿ ಹಾಗೂ ಗ್ರೇಡ್‌–2 ಕಾರ್ಯದರ್ಶಿ ದುರ್ಗಪ್ಪಾ ತಹಶೀಲ್ದಾರ್‌ ಅಮಾನತುಗೊಂಡವರು.

ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡಿದ್ದ ಜಮೀನುಗಳಿಗೆ (ಎನ್‌.ಎ) ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಮತ್ತು ಪರವಾನಿಗೆ ಪಡೆಯದೇ ಅನುಮೋದನೆ ನೀಡಿದ್ದರು ಎನ್ನುವ ಆರೋಪ ಪಿಡಿಒಗಳ ವಿರುದ್ಧ ಕೇಳಿಬಂದಿತ್ತು. ಇದರ ಬಗ್ಗೆ ಶಾಸಕ ಅಭಯ ಪಾಟೀಲ ಕಳೆದ ವರ್ಷ ನವೆಂಬರ್‌ನಲ್ಲಿ ವಿಧಾನಸಭೆಯಲ್ಲಿ ಗಮನ ಸೆಳೆದಿದ್ದರು. ಸವದತ್ತಿ ತಾಲ್ಲೂಕು ಪಂಚಾಯ್ತಿಯ ಸಹಾಯಕ ನಿರ್ದೇಶಕ ಪ್ರವೀಣ ಸಾಲಿ ನೇತೃತ್ವದ ನಾಲ್ಕು ಜನ ಸದಸ್ಯರ ತಂಡವು ತನಿಖೆ ಕೈಗೊಂಡು, ವರದಿ ಸಲ್ಲಿಸಿತ್ತು.

ADVERTISEMENT

ಹಂತ ಹಂತವಾಗಿ ಕ್ರಮ: ಸಿಇಒ

‘ತನಿಖಾ ತಂಡವು ನೀಡಿದ ವರದಿಯನ್ನಾಧರಿಸಿ, ಪಿಡಿಒಗಳನ್ನು ಅಮಾನತುಗೊಳಿಸಿದ್ದೇನೆ. ಇನ್ನೂ ತನಿಖೆ ನಡೆಯುತ್ತಿದ್ದು, ಹಂತ ಹಂತವಾಗಿ ಪಿಡಿಒಗಳ ಮೇಲೆ ಕ್ರಮಕೈಗೊಳ್ಳಲಾಗುವುದು’ ಎಂದು ಸಿಇಒ ರಾಜೇಂದ್ರ ಕೆ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.