ಬೆಂಗಳೂರು: ರಾಜ್ಯದ ಹಿಂದುಳಿದ 153 ತಾಲ್ಲೂಕುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ‘ವಿಶೇಷ ಅಭಿವೃದ್ಧಿ ಯೋಜನೆ’ಯಡಿ 2007ರಿಂದ 2021ರವರೆಗೆ ₹ 27,341 ಕೋಟಿ ವೆಚ್ಚ ಮಾಡಿದೆ. ಇಷ್ಟೊಂದು ಹಣ ಸುರಿದರೂ ‘ಸುಸ್ಥಿರ ಅಭಿವೃದ್ಧಿ ಗುರಿ’ (ಎಸ್‌ಡಿಜಿ) ಸಾಧಿಸುವಲ್ಲಿ ಈ ತಾಲ್ಲೂಕುಗಳು ಭಾರಿ ಹಿಂದುಳಿದಿವೆ.
ನೀತಿ ಆಯೋಗದ ‘ಎಸ್‌ಡಿಜಿ ಸೂಚ್ಯಂಕ– 2021’ದಲ್ಲಿರುವ ಅಂಶಗಳು ಪ್ರಾದೇಶಿಕ ಅಸಮಾನತೆಯ ಬಗ್ಗೆ ಕನ್ನಡಿ ಹಿಡಿದಿವೆ. ಅದರ ಪ್ರಕಾರ, ರಾಜ್ಯದ ಸರಾಸರಿಗೆ ಹೋಲಿಸಿದರೆ ಈ 153 ತಾಲ್ಲೂಕುಗಳ ಪೈಕಿ, 66ರಲ್ಲಿ ಇನ್ನೂ ಬಡತನವಿದೆ. 131 ತಾಲ್ಲೂಕುಗಳು ಹಸಿವು ಮುಕ್ತ ಆಗಿಲ್ಲ!
ಡಿ.ಎಂ. ನಂಜುಂಡಪ್ಪ ವರದಿಯಲ್ಲಿದ್ದ 114 ತಾಲ್ಲೂಕುಗಳು ಹಾಗೂ ಇದರಲ್ಲಿ ವಿಭಜನೆಯಾಗಿ ಹೊಸತಾಗಿ ರಚನೆಯಾಗಿರುವ 39 ತಾಲ್ಲೂಕುಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆ ಅಡಿ ಅನುದಾನ ಒದಗಿಸಲಾಗಿತ್ತು.
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು ರಚಿಸಲಾಗಿದ್ದ ಉನ್ನತಾಧಿಕಾರ ಸಮಿತಿ, ಈ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆಂದು ಎಂಟು ವರ್ಷಗಳ (2007–08ರಿಂದ 2014–2015) ‘ವಿಶೇಷ ಅಭಿವೃದ್ಧಿ ಯೋಜನೆ’ಗೆ ₹ 30 ಸಾವಿರ ಕೋಟಿ ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು. ಬೆಳಗಾವಿಯಲ್ಲಿ 2017ರಲ್ಲಿ ನಡೆದ ಅಧಿವೇಶನದಲ್ಲಿ ಯೋಜನೆಯ ಅನುಷ್ಠಾನವನ್ನು 2015–16ರಿಂದ 2019–20ರವರೆಗೆ ವಿಸ್ತರಿಸಿ ಮತ್ತೆ ವಾರ್ಷಿಕ ₹ 3 ಸಾವಿರ ಕೋಟಿಯಂತೆ ನೀಡಿ ಮುಂದುವರಿಸಲು ನಿರ್ಧರಿಸಲಾಗಿತ್ತು.
ಅಷ್ಟೂ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಅನುದಾನದಲ್ಲಿ ಶೇ 40ರಷ್ಟು ಕಲ್ಯಾಣ ಕರ್ನಾಟಕ (29 ತಾಲ್ಲೂಕು), ಶೇ 20ರಷ್ಟು ಬೆಳಗಾವಿ ವಿಭಾಗ (31 ತಾಲ್ಲೂಕು), ಶೇ 15ರಷ್ಟು ಮೈಸೂರು ವಿಭಾಗಕ್ಕೆ (22 ತಾಲ್ಲೂಕು) ಶೇ 25ರಷ್ಟು ಬೆಂಗಳೂರು ವಿಭಾಗಕ್ಕೆ (32 ತಾಲ್ಲೂಕು) ಒದಗಿಸಲಾಗಿದೆ.
ಇದೀಗ ‘ಎಸ್‌ಡಿಜಿ ಸೂಚ್ಯಂಕ–2021’ನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ವಿಶೇಷ ಅಭಿವೃದ್ಧಿ ಯೋಜನೆಯ ಕಾಲಾವಧಿ ಮುಗಿದಿರುವುದರಿಂದನೀತಿ ಆಯೋಗದ 49 ಸೂಚಕಗಳನ್ನು ಅಳವಡಿಸಿ ಹೊಸ ‘ಪ್ರಾದೇಶಿಕ ಅಸಮತೋಲನ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಅದರಂತೆ, ಈ ತಾಲ್ಲೂಕುಗಳ ಅಭಿವೃದ್ಧಿಗೆ ವಾರ್ಷಿಕ ನೀಡಲಾಗುವ ₹ 3 ಸಾವಿರ ಕೋಟಿ ಅನುದಾನ ಯೋಜನೆಯನ್ನುಇನ್ನೂ 5 ವರ್ಷ ಮುಂದುವರಿಸಿ, ಈ ಐದು ‘ಸುಸ್ಥಿರ ಗುರಿ’ಗಳ ಅಭಿವೃದ್ಧಿಗೆ ಬಳಸಲು ಉದ್ದೇಶಿಸಿದೆ. ಬಡತನ ನಿರ್ಮೂಲನೆ, ಹಸಿವು ಮುಕ್ತ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಸಾಧಿಸಲು ನಿಗದಿತ ತಾಲ್ಲೂಕುಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಈ ಉದ್ದೇಶದಿಂದ ರೂಪುರೇಷೆ ಸಿದ್ಧಗೊಂಡಿದ್ದು, ಅನುಮೋದನೆಗಾಗಿ ಶೀಘ್ರವೇ ಸಂಪುಟ ಸಭೆಯಲ್ಲಿ ಮಂಡನೆ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
‘ಇದುವರೆಗೆ, ವಿಶೇಷ ಅಭಿವೃದ್ಧಿ ಯೋಜನೆಯ ಒಟ್ಟು ಅನುದಾನದಲ್ಲಿ ಶೇ 60ರಷ್ಟು ಕೇವಲ 5 ಇಲಾಖೆಗಳಿಗೆ (ಜಲಸಂಪನ್ಮೂಲ ಶೇ 19, ಗ್ರಾಮೀಣಾಭಿವೃದ್ಧಿ ಶೇ 17, ವಸತಿ ಶೇ 11 ಲೋಕೋಪಯೋಗಿ ಶೇ 7, ಇಂಧನ ಶೇ 6) ಲಭ್ಯವಾಗಿದೆ. ಆದರೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕೇವಲ ಶೇ 12.5 (ಶಿಕ್ಷಣ ಶೇ 5.8, ಆರೋಗ್ಯ ಶೇ 5, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶೇ 1.6) ನಿಗದಿಪಡಿಸಲಾಗಿದೆ. ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಾಗಿ, ಯೋಜನೆಯನ್ನು ಪರಿಷ್ಕರಿಸಿ, ಇನ್ನು ಮುಂದೆ ಈ ಅನುದಾನವನ್ನು 153 ತಾಲ್ಲೂಕುಗಳಿಗೆ ಹಂಚಿಕೆ ಮಾಡಿ, ಶೇ 30ರಷ್ಟು ಆರೋಗ್ಯ ಮತ್ತು ಪೌಷ್ಟಿಕತೆಗೆ, ಶೇ 30ರಷ್ಟು ಶಿಕ್ಷಣಕ್ಕೆ,ಶೇ 20ರಷ್ಟು ಕೃಷಿ ಮತ್ತು ಜಲಸಂಪನ್ಮೂಲ, ಶೇ10ರಷ್ಟು ಆರ್ಥಿಕ ಸೇರ್ಪಡೆ ಮತ್ತು ಶೇ 5ರಷ್ಟು ಕೌಶಲಾಭಿವೃದ್ಧಿ, ಶೇ 5ರಷ್ಟು ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.
ಇನ್ನು ತಾಲ್ಲೂಕು ಸಮಗ್ರ ಅಭಿವೃದ್ಧಿ ಯೋಜನೆ?
ಪ್ರಾದೇಶಿಕ ಸಮತೋಲನ ಯೋಜನೆಗೆ ಆರ್ಥಿಕ ಇಲಾಖೆ ಇನ್ನು ಮುಂದೆ ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಅನುದಾನವನ್ನು ನಿಗದಿಪಡಿಸುವಂತೆಯೋಜನಾ ಇಲಾಖೆಗೆ ಸೂಚಿಸಲು ಚಿಂತನೆ ನಡೆದಿದೆ.
‘ನೀತಿ ಆಯೋಗದ 49 ಸೂಚಕಗಳಂತೆ ಪ್ರತಿವರ್ಷ ತಾಲ್ಲೂಕುಗಳ ಅಭಿವೃದ್ಧಿ ಆಧರಿಸಿ ಆದ್ಯತೆ ನಿಗದಿಪಡಿಸಿ ಅಭಿವೃದ್ಧಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲು ಯೋಚಿಸಲಾಗಿದೆ. ಅನುದಾನವನ್ನು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಕ್ತ ಅನುದಾನವಾಗಿ ನೀಡಿದರೆ, ಯೋಜನಾ ಇಲಾಖೆಯ ಅಧಿಕಾರಿಗಳಾದ ತಾಲ್ಲೂಕು ಯೋಜನಾ ಅಧಿಕಾರಿಗಳು ಹಂಚಿಕೆ ಮಾಡಿ ಅನುಷ್ಠಾನ ಮಾಡಬಹುದು. ಅವರು ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ನೀಡಬೇಕು. ವರ್ಷಾಂತ್ಯದಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಅಭಿವೃದ್ಧಿ ಬೆಳವಣಿಗೆಯ ಬಗ್ಗೆ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ನೀಡುವಂತೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ತಿಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.