ADVERTISEMENT

ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದ ಅನುದಾನ: ಸಿಕ್ಕಿದ್ದು ಅಲ್ಪ, ಬರಬೇಕಿದೆ ಅಧಿಕ

ಮಂಜುನಾಥ್ ಹೆಬ್ಬಾರ್‌
Published 4 ಜನವರಿ 2024, 0:30 IST
Last Updated 4 ಜನವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದಿಂದ ಮೂರು ವರ್ಷಗಳಲ್ಲಿ ಬಂದಿರುವ ಅನುದಾನ ಕಡಿಮೆ. ಬರಬೇಕಾಗಿರುವ ಅನುದಾನದ ಪ್ರಮಾಣ ಜಾಸ್ತಿ ಇದೆ. 

2021ರಿಂದ 2026ರ ಅವಧಿಗೆ ₹29,110 ಕೋಟಿ ಅನುದಾನವನ್ನು (ಸ್ಥಳೀಯ ಸಂಸ್ಥೆ, ವಿಪತ್ತು ನಿರ್ವಹಣೆ ಹಾಗೂ ಆರೋಗ್ಯ ಕ್ಷೇತ್ರ) ಕರ್ನಾಟಕಕ್ಕೆ ಬಿಡುಗಡೆ ಮಾಡಲು ಆಯೋಗ ಶಿಫಾರಸು ಮಾಡಿತ್ತು. ಮೂರು ವರ್ಷಗಳಲ್ಲಿ ₹11,449 ಕೋಟಿಯಷ್ಟೇ ಬಿಡುಗಡೆಯಾಗಿದೆ. ಇದರಲ್ಲಿ ತೆರಿಗೆ ಪಾಲು ಹಂಚಿಕೆಯ ಬಳಿಕ ಆದಾಯ ಕೊರತೆ ಅನುದಾನವೂ (1,631 ಕೋಟಿ) ಸೇರಿದೆ. ಈ ಅನುದಾನವನ್ನು ಕೇಂದ್ರ ಸರ್ಕಾರ 2021–22ನೇ ಆರ್ಥಿಕ ವರ್ಷದಲ್ಲೇ ಬಿಡುಗಡೆಗೊಳಿಸಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಅನುದಾನ ₹14,630 ಕೋಟಿ ಬರಬೇಕಾಗಿದೆ. 

ADVERTISEMENT

ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸದ ಕಾರಣಕ್ಕೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದು ಕೇಂದ್ರದ ಸಮಜಾಯಿಷಿ.

‘ಸಂವಿಧಾನದ 243 ಇ ವಿಧಿಯ ಅಡಿಯ ಪ್ರಕಾರ, ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರಗಳ ಹೊಣೆ. ಚುನಾವಣೆ ನಡೆಸಲು ಅಡ್ಡಿಯಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವಂತೆ ಕರ್ನಾಟಕ ಸರ್ಕಾರಕ್ಕೆ 2023ರ ಏಪ್ರಿಲ್‌ ತಿಂಗಳಲ್ಲೇ ಸಲಹೆ ನೀಡಲಾಗಿತ್ತು’ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. 

‘ಆದರೂ, ರಾಜ್ಯ ಸರ್ಕಾರ ಈವರೆಗೆ ಚುನಾವಣೆ ನಡೆಸಿಲ್ಲ. ಉಳಿದ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಕಿ ಅನುದಾನ ಬಿಡುಗಡೆಯಾಗಲಿದೆ’ ಎಂದು ಹೇಳಿವೆ. 

ಬಾರದ ಎನ್‌ಡಿಆರ್‌ಎಫ್‌ ಹಣ:

ಹಣಕಾಸು ಆಯೋಗದ ಶಿಫಾರಸಿನ ಅನುಸಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್‌ಡಿಆರ್‌ಎಫ್) ರಾಜ್ಯಕ್ಕೆ 2021–22ರಲ್ಲಿ ₹1,623 ಕೋಟಿ ಹಾಗೂ 2022–23ರಲ್ಲಿ ₹939 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, 2023–24ನೇ ಆರ್ಥಿಕ ವರ್ಷದ ಅನುದಾನ ಇಲ್ಲಿಯತನಕ ಬಿಡುಗಡೆಯಾಗಿಲ್ಲ. 

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಶೀಘ್ರವೇ ₹18,177 ಕೋಟಿ ಬಿಡುಗಡೆ ಮಾಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ನಾಲ್ಕು ಬಾರಿ ಮನವಿ ಸಲ್ಲಿಸಿದೆ. ಡಿಸೆಂಬರ್‌ 23ರಂದು ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಬರ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದರು. ಆದರೆ, ಡಿಸೆಂಬರ್‌ 23ರಂದು ಸಭೆ ನಡೆದಿರಲಿಲ್ಲ. ಹೀಗಾಗಿ, ಬರ ಪರಿಹಾರ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ಇಲ್ಲಿಯವರೆಗೆ ತೀರ್ಮಾನ ತೆಗೆದುಕೊಂಡಿಲ್ಲ.

ವಿಪತ್ತು ನಿರ್ವಹಣಾ ಅನುದಾನದ ರೂಪದಲ್ಲಿ (ಎಸ್‌ಡಿಆರ್‌ಎಫ್‌) ಐದು ವರ್ಷದ ಅವಧಿಗೆ ರಾಜ್ಯಕ್ಕೆ ₹4,369 ಕೋಟಿ ನಿಗದಿಪಡಿಸಲಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾಗಿರುವುದು ₹1,803 ಕೋಟಿ ಮಾತ್ರ. ರಾಜ್ಯಕ್ಕೆ ಈ ಆರ್ಥಿಕ ವರ್ಷದಲ್ಲಿ ₹929 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ ಜುಲೈ ತಿಂಗಳಲ್ಲಿ ಮೊದಲ ಕಂತಿನ ರೂಪದಲ್ಲಿ ₹348 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಎರಡನೇ ಕಂತು ಬಂದಿಲ್ಲ.  

ಪ್ರತಿವರ್ಷ ಎರಡು ಸಮಾನ ಕಂತುಗಳಲ್ಲಿ ಕೇಂದ್ರದ ಪಾಲನ್ನು ಎಸ್‌ಡಿಆರ್‌ಎಫ್‌ ಗೆ ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಹಿಂದಿನ ಕಂತಿನಲ್ಲಿ ಬಿಡುಗಡೆಯಾದ ಮೊತ್ತದ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಮತ್ತು ಎಸ್‌ಡಿಆರ್‌ಎಫ್‌ನಿಂದ ಕೈಗೊಂಡ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ವರದಿ ಸ್ವೀಕರಿಸಿದ ಬಳಿಕ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.