ಹುಬ್ಬಳ್ಳಿ: ‘ಪೊಲೀಸ್ ಇಲಾಖೆಯನ್ನು ಬಲಪಡಿಸಲು 16 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಪೊಲೀಸ್ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆ ಸಶಕ್ತವಾಗಿದ್ದರೆ ರಾಜ್ಯದಲ್ಲಿ ಶಾಂತಿ– ಸುವ್ಯವಸ್ಥೆ ನೆಲೆಸುತ್ತದೆ. ಬೃಹತ್ ಸಂಖ್ಯೆಯಲ್ಲಿ ಕಾನ್‌ಸ್ಟೆಬಲ್ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ 500 ಪೊಲೀಸ್ ಠಾಣೆ ಹಾಗೂ 10 ಸಾವಿರ ಸಿಬ್ಬಂದಿಗೆ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು’ ಎಂದರು.
‘ಪೊಲೀಸ್ ಸಮವಸ್ತ್ರ ಧರಿಸಿದ ಮೇಲೆ ಎಲ್ಲ ಹಂತದ ಸಿಬ್ಬಂದಿಯೂ ಜನರ ನಡುವೆ ಇದ್ದು ಕೆಲಸ ಮಾಡಬೇಕು. ಇನ್‌ಸ್ಪೆಕ್ಟರ್, ಡಿವೈಎಸ್‌ಪಿ ಹಂತದದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಆದೇಶ ಹೊರಡಿಸುವುದು ಸರಿಯಲ್ಲ. ಬಹುತೇಕರು ಹೀಗೆ ಮಾಡುತ್ತಿದ್ದು, ಅವರಿಗೆಲ್ಲ ಸೂಕ್ತ ತರಬೇತಿಯ ಅಗತ್ಯವಿದೆ. ಅದಕ್ಕಾಗಿ, ಅವರಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ರಾಷ್ಟ್ರೀಯ
ರಕ್ಷಣಾ ಅಕಾಡೆಮಿ (ಎನ್‌ಡಿಎ) ಜೊತೆ ಚರ್ಚಿಸಲಾಗಿದೆ’ ಎಂದರು.
‘ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ಕಲಬುರ್ಗಿ, ಹುಬ್ಬಳ್ಳಿ– ಧಾರವಾಡ, ಮೈಸೂರು ಸೇರಿ ಆರು ನಗರಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ
ಸ್ಥಾಪಿಸಲಾಗುವುದು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ‘ಅಪರಾಧ ಪಕರಣಗಳನ್ನು ತ್ವರಿತವಾಗಿ ಭೇದಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ 250 ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು. ಆನ್‌ಲೈನ್ ಲಾಟರಿ ಹಾಗೂ ಜೂಜಿಗೆ ಕಡಿವಾಣ ಹಾಕಲು ಶೀಘ್ರ ಕಾಯ್ದೆ ಜಾರಿಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.