ADVERTISEMENT

ಎಸಿಬಿ ದಾಳಿ: ಬಿಡಿಎ ಎಂಜಿನಿಯರ್‌ ಬಳಿ 18 ಕೆ.ಜಿ ಚಿನ್ನ!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 19:25 IST
Last Updated 6 ಅಕ್ಟೋಬರ್ 2018, 19:25 IST
ಟಿ. ಆರ್. ಸ್ವಾಮಿ, ಎನ್‌.ಜಿ ಗೌಡಯ್ಯ
ಟಿ. ಆರ್. ಸ್ವಾಮಿ, ಎನ್‌.ಜಿ ಗೌಡಯ್ಯ   

ಬೆಂಗಳೂರು: ಬಿಡಿಎ ಎಂಜಿನಿಯರ್‌ ಎನ್‌. ಜಿ. ಗೌಡಯ್ಯ, ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ ಮತ್ತು ಅವರ ಸಂಬಂಧಿಕರ ಮನೆಗಳನ್ನು ಎರಡನೇ ದಿನವೂ ಜಾಲಾಡುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರಿಗೆ ಮೊಗೆದಷ್ಟು ಚಿನ್ನಾಭರಣ, ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿಗುತ್ತಿವೆ.

ಗೌಡಯ್ಯ ಅವರ ಮನೆಯಲ್ಲಿ ಸಿಕ್ಕಿರುವ 18.2 ಕೆ.ಜಿ ಚಿನ್ನ ಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ. ಇದು ಎಸಿಬಿ ಸ್ಥಾಪನೆಯಾದ ಬಳಿಕ ವಶಪಡಿಸಿಕೊಂಡ ಭಾರಿ ಹಣ, ಆಭರಣ ಎಂಬ ದಾಖಲೆ ಸೃಷ್ಟಿಸಿದೆ.ಹುಡುಕುತ್ತಾ ಹೋದಂತೆ ಹೊಸ ಹೊಸ ಬೆಳ್ಳಿ– ಬಂಗಾರದ ಆಭರಣಗಳು, ಜಮೀನು ಮತ್ತು ನಿವೇಶನ ಪತ್ರಗಳು ಪತ್ತೆಯಾಗುತ್ತಿವೆ.

ಗೌಡಯ್ಯ ಅವರ ಬಳಿ ಶುಕ್ರವಾರ 7.5 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಶನಿವಾರ ಬೆಳಿಗ್ಗೆ ಹೊತ್ತಿಗೆ ಇದು 18.2 ಕೆ.ಜಿಗೆ ಏರಿತು. ಆರಂಭದಲ್ಲಿ ಇದೊಂದು ಸಾಮಾನ್ಯ ದಾಳಿ ಇರಬಹುದು ಎಂಬುದು ಎಸಿಬಿ ಅಧಿಕಾರಿಗಳ ಲೆಕ್ಕಾಚಾರವಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಇದು ‘ಭಾರಿ ಬೇಟೆ’ ಎಂದು ಮನವರಿಕೆಯಾಯಿತು.

ADVERTISEMENT

‘ಅಧಿಕಾರಿಗಳಿಬ್ಬರ ಮನೆಗಳ ಮೇಲೆ ದಾಳಿ ಆಗಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ನಮಗೆ 500 ಕರೆಗಳು ಬಂದಿವೆ. 60–70 ಮೇಲ್‌ಗಳು ಬಂದಿವೆ. ಅಲ್ಲಿ ಆಸ್ತಿ ಇರಬಹುದು ನೋಡಿ, ಇಲ್ಲಿ ಆಸ್ತಿ ಇರಬಹುದು ನೋಡಿ. ಆ ಆಸ್ತಿ ಅವರದೇ ಇರಬಹುದು ಪರಿಶೀಲಿಸಿ ಎನ್ನುವ ಮಾಹಿತಿಗಳೂ ದೊರೆತಿವೆ. ಸಾರ್ವಜನಿಕರಿಂದ ಬಂದಿರುವ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಎಸಿಬಿ ಐಜಿಪಿ ಚಂದ್ರಶೇಖರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ವಿವಿಧ ಸ್ಥಳಗಳು, ತುಮಕೂರು ಜಿಲ್ಲೆಯ ಗುಬ್ಬಿ ಸೇರಿದಂತೆ ಎಂಟು ಕಡೆ ದಾಳಿಗಳು ನಡೆಸಲಾಗಿದೆ. ಪರಿಶೀಲನೆ ಕಾರ್ಯ ಭರದಿಂದ ಸಾಗಿದೆ. ಈ ಸಂಬಂಧ ಪ್ರಾಥಮಿಕ ವರದಿ ಸಿದ್ಧಪಡಿಸಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಗೆ ಇಬ್ಬರೂ ಸಲ್ಲಿಸಿರುವ ಆಸ್ತಿ ವಿವರಗಳನ್ನೂ ಪರಿಶೀಲಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಐ.ಟಿಗೂ ಮಾಹಿತಿ ನೀಡಲಾಗುತ್ತದೆ.

‘ಅಧಿಕಾರಿಗಳ ಬಳಿ ಹಳೇ ನೋಟು ಸಿಕ್ಕಿಲ್ಲ. ಸಿಕ್ಕಿರುವುದೆಲ್ಲ ₹ 500 ಹಾಗೂ ₹ 2,000 ಸಾವಿರ ಮುಖಬೆಲೆಯ ನೋಟುಗಳು. ಮಹಡಿ ಮೇಲಿಂದ ಕಿಟಕಿ ಮೂಲಕ ಎಷ್ಟು ನೋಟು ಬಿಸಾಡಿದ್ದಾರೆ ಎಂದು ಲೆಕ್ಕಹಾಕಿಲ್ಲ. ಸ್ವಾಮಿ ಅವರ ಮನೆಯಲ್ಲಿ $ 4,000 ಸಿಕ್ಕಿದೆ. ಇದುವರೆಗೆ ಸಿಕ್ಕಿರುವ ಆಸ್ತಿಪಾಸ್ತಿ ಕುರಿತು ನಿಖರಅಂದಾಜು ಮಾಡಲು ಸಾಧ್ಯವಾಗಿಲ್ಲ’ ಎಂದೂ ಐಜಿಪಿ ಹೇಳಿದರು.

‘ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಸ್ವಾಮಿ ತಮ್ಮ ಮನೆಯ ಬಾಗಿಲು ತೆರೆಯಲು 45 ನಿಮಿಷ ಸತಾಯಿಸಿದರು. ಬಳಿಕ ನಾವು ಒಳ ಪ್ರವೇಶಿಸಲು ಸಾಧ್ಯವಾಯಿತು. ಈ ಅವಧಿಯಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶ ಮಾಡಿರಬಹುದೇ ಎಂದು ತನಿಖೆ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದರು. ಎಸಿಬಿ ಎಸ್‌ಪಿ ಡಾ. ಸಂಜೀವ್ ಪಾಟೀಲ ಅವರೂ ಹಾಜರಿದ್ದರು.

ಲಾಕರ್‌ ಕೀ ಕೊಟ್ಟ ಸುಳಿವು

ಗೌಡಯ್ಯ ಅವರ ಬಸವೇಶ್ವರ ನಗರದ ಮನೆಯನ್ನು ಎಸಿಬಿ ಅಧಿಕಾರಿಗಳು ಶೋಧಿಸುತ್ತಿದ್ದಾಗ ಸಿಕ್ಕ ಕೀ ಜಯನಗರದ ಅವರ ಅತ್ತೆ ಮನೆಯಲ್ಲಿರುವ ಸುರಕ್ಷಿತ ಲಾಕರ್‌ನೊಳಗೆ ಮುಚ್ಚಿಟ್ಟಿದ್ದ 4.5 ಕೆ.ಜಿ ಚಿನ್ನದ ಆಭರಣಗಳನ್ನು ಪತ್ತೆಹಚ್ಚಲು ನೆರವಾಯಿತು.

ಲಾಕರ್‌ ಕೀಗಳ ಗೊಂಚಲಿನಲ್ಲಿದ್ದ ಒಂದು ಕೀ ಯಾವುದೆಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿತು. ಅಷ್ಟೊತ್ತಿಗೆ ಗೌಡಯ್ಯನವರ ಪತ್ನಿಯ ತವರಿಗೆ ಹೋಗಿದ್ದ ಮತ್ತೊಂದುತಂಡ ಅಲ್ಲಿದ್ದ ಸುರಕ್ಷಿತ ಲಾಕರ್‌ ಕೀ ಸಿಗದೆ ಒದ್ದಾಡಿತು.

ಬಳಿಕ ಬಸವೇಶ್ವರ ನಗರದಿಂದ ಕೀ ಕಳುಹಿಸಲಾಯಿತು. ಆ ಕೀ ಬಳಸಿ ಲಾಕರ್‌ ತೆರೆದಾಗ 4.5 ಕೆ.ಜಿ ಚಿನ್ನ ಸಿಕ್ಕಿತು. ಇದರಲ್ಲಿ 80 ಬಳೆಗಳು, ಒಂದು ವಜ್ರದ ಸರವೂ ಸೇರಿವೆ. ಮಗಳು ಮತ್ತು ಅಳಿಯ ಆಭರಣ ಇಟ್ಟ ಬಗ್ಗೆ ಮನೆಯವರಿಗೆ ತಿಳಿದೇ ಇರಲಿಲ್ಲವಂತೆ!

ಇದಲ್ಲದೆ, ಗೌಡಯ್ಯ ಬಿಎಂಡಬ್ಲ್ಯು ಕಾರು ಬಳಸುತ್ತಿರುವುದು ಪತ್ತೆ ಆಗಿದೆ. ಅವರ ಮನೆಯಲ್ಲಿ ದುಬಾರಿ ಕಾರಿನ ಫಿಲ್ಟರ್‌ಗಳು ದೊರೆತ ಬಳಿಕ, ಕಾರು ಯಾವುದೆಂದು ಹುಡುಕಾಡಲಾಯಿತು. ಕೊನೆಗೆ ಕಾರಿನ ಕೀ ಸಿಕ್ಕಿತು. ಕಾರನ್ನು ಮನೆಯಿಂದ ಬಹಳಷ್ಟು ದೂರದಲ್ಲಿ ನಿಲ್ಲಿಸಲಾಗಿತ್ತು ಎಂದು ಎಸಿಬಿ ಮೂಲಗಳು ತಿಳಿಸಿವೆ.

ಸ್ವಾಮಿ ಕುಟುಂಬ ನಾಪತ್ತೆ?

ವಿಚಾರಣೆಗೆ ಹಾಜರಾಗಬೇಕಿದ್ದ ಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ. ತಕ್ಷಣ ಎಸಿಬಿ ಕಚೇರಿಯಲ್ಲಿ ಹಾಜರಾಗುವಂತೆ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಲಾಗುತ್ತಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಗೌಡಯ್ಯ ಮತ್ತು ಅವರ ಪತ್ನಿ ವಿಚಾರಣೆ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಯಲ್ಲಿ ಶನಿವಾರ ಏಳು ಗಂಟೆಗೂ ಹೆಚ್ಚು ಕಾಲ ನಡೆಯಿತು. ವಿಚಾರಣೆ ಮುಂದುವರಿಯುತ್ತಿದೆ ಎನ್ನಲಾಗಿದೆ.

ಸಿಕ್ಕಿದ್ದು ಏನು?

ಗೌಡಯ್ಯ ಬಳಿ 18.2 ಕೆ.ಜಿ ಚಿನ್ನ

10 ಕೆ.ಜಿ ಬೆಳ್ಳಿ

2 ಮನೆ, 8 ನಿವೇಶನ

14 ಅಪಾರ್ಟ್‌ಮೆಂಟ್‌

3 ಕಾರು, 3 ಬೈಕ್‌

₹ 77 ಲಕ್ಷ ನಗದು

ಬ್ಯಾಂಕ್‌ ಖಾತೆಗಳಲ್ಲಿ ₹ 15 ಲಕ್ಷ ನಗದು, ₹ 30 ಲಕ್ಷ ಠೇವಣಿ

***

ಟಿ. ಆರ್. ಸ್ವಾಮಿ ಬಳಿ 11 ನಿವೇಶನ

8 ಮನೆ

14 ಎಕರೆ ಕೃಷಿ ಜಮೀನು

1.6 ಕೆ.ಜಿ ಚಿನ್ನ

7.5ಕೆ.ಜಿ ಬೆಳ್ಳಿ

3 ಕಾರು

₹ 4.52 ಕೋಟಿ ನಗದು

ಬೆಳಗಾವಿಯ ಎಸಿಎಫ್‌, ಎಇಇ ಮನೆಗಳ ಮೇಲೂ ದಾಳಿ

ಎಸಿಬಿ ಅಧಿಕಾರಿಗಳು ಶನಿವಾರ ಬೆಳಗಿನ ಜಾವ ಮತ್ತಿಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಉಪ ವಿಭಾಗದ ಎಸಿಎಫ್ ಚಂದ್ರಗೌಡ ಬಿ.ಪಾಟೀಲ ಮತ್ತು ಬಾಗಲಕೋಟೆ ಉಪ ವಿಭಾಗದ ಗ್ರಾಮೀಣ ‌ನೀರು ಸರಬರಾಜು ‌ಇಲಾಖೆಯ ಸಹಾಯಕ ‌ಕಾರ್ಯನಿರ್ವಾಹಕ ಎಂಜಿನಿಯರ್ ಚಿದಾನಂದ ಬಿ. ಮಿಂಚಿನಾಳ ದಾಳಿಗೆ ಒಳಗಾದ ಅಧಿಕಾರಿಗಳು.

ಚಿದಾನಂದಗೌಡ ಅವರ ರಾಮತೀರ್ಥನಗರದ ಮನೆ, ಖಾನಾಪುರದ ಕಚೇರಿ, ಬೈಲಹೊಂಗಲದ ಸೋದರನ ಮನೆ ಶೋಧಿಸಲಾಗುತ್ತಿದೆ. ವಿಜಯಪುರದಲ್ಲಿರುವ ಮಿಂಚಿನಾಳ ಅವರ ಎರಡು ಮನೆ ಮತ್ತು ಕಚೇರಿಗಳಲ್ಲಿ ಪರಿಶೀಲಿಸಲಾಗುತ್ತಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.