ADVERTISEMENT

ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೋವಿಡ್: ಆರೋಗ್ಯ ಇಲಾಖೆ

ಸುರಕ್ಷಾ ಪಿ.
Published 22 ಜುಲೈ 2021, 5:39 IST
Last Updated 22 ಜುಲೈ 2021, 5:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ (ಮಾರ್ಚ್‌ನಿಂದ ಜೂನ್‌ವರೆಗೆ) 1.88 ಲಕ್ಷ ಮಕ್ಕಳು ಕೋವಿಡ್‌ ಸೋಂಕಿಗೆ ತುತ್ತಾಗಿರುವುದು ಆರೋಗ್ಯ ಇಲಾಖೆ ಅಂಕಿಅಂಶದಿಂದ ತಿಳಿದು ಬಂದಿದೆ.

ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿರ್ದೇಶಕ ಬಲರಾಮ್ ಭಾರ್ಗವ ಸೂಚನೆ ನೀಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಂಕಿಅಂಶ ಪ್ರಕಟಿಸಿದೆ.

ರಾಜ್ಯದಲ್ಲಿ ಇದುವರೆಗೆ ಕೋವಿಡ್‌ನಿಂದ 1,212 ಮಕ್ಕಳು ಮೃತಪಟ್ಟಿದ್ದಾರೆ. ಜತೆಗೆ, ಆಗಸ್ಟ್‌ನಿಂದ ಕೋವಿಡ್‌ ಮೂರನೇ ಅಲೆ ಹರಡುವ ಸಾಧ್ಯತೆಗಳಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ADVERTISEMENT

ಐಸಿಎಂಆರ್ ರಾಷ್ಟ್ರೀಯ ಸಮೀಕ್ಷೆ ಪ್ರಕಾರ, ಮಾರ್ಚ್ 1ರಿಂದ ಜೂನ್ 29ರ ನಡುವೆ ನಾಲ್ಕು ತಿಂಗಳಲ್ಲಿ ಅವಧಿಯಲ್ಲಿ ದೇಶದಲ್ಲಿ 18,91,775 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ 1,88,612 (ಶೇಕಡಾ 9.97) ಮಕ್ಕಳು ನಮ್ಮ ರಾಜ್ಯದವರಾಗಿದ್ದಾರೆ.

ಮೊದಲ ಅಲೆಯಲ್ಲಿ ಒಟ್ಟು ಸೋಂಕಿತರಲ್ಲಿ ಶೇ 8ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಆದರೆ, ಎರಡನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾದ ಪ್ರಮಾಣ ಶೇ 2ರಷ್ಟು ಹೆಚ್ಚಾಗಿತ್ತು ಎಂದು ಮಕ್ಕಳ ತಜ್ಞ ಡಾ.ಜೆ.ಟಿ.ಶ್ರೀಕಾಂತ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಫೆಬ್ರುವರಿ 28 ರವರೆಗೆ 81,596 ಮಕ್ಕಳು ಸೋಂಕಿಗೆ ಒಳಗಾಗಿದ್ದು, 118 ಮಕ್ಕಳು ಮೃತಪಟ್ಟಿದ್ದರು.

ಐಸಿಎಂಆರ್ ರಾಷ್ಟ್ರೀಯ ಸಮೀಕ್ಷೆ ಪ್ರಕಾರ 6-9 ವಯೋಮಾನದ 2,892 ಮಕ್ಕಳಲ್ಲಿ ಶೇಕಡಾ 57.2 ಮತ್ತು 10-17 ವಯೋಮಾನದ 5,799 ಮಕ್ಕಳಲ್ಲಿ ಶೇಕಡಾ 61.6ರಷ್ಟು ಸೋಂಕು ಪತ್ತೆಯಾಗಿರುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.