ADVERTISEMENT

19 ಲಕ್ಷ ಇವಿಎಂ ನಾಪತ್ತೆ! ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ಚುನಾವಣಾ ವ್ಯವಸ್ಥೆ ಸುಧಾರಣೆ–ವಿಧಾನಸಭೆಯಲ್ಲಿ ಗಂಭೀರ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 18:40 IST
Last Updated 29 ಮಾರ್ಚ್ 2022, 18:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸಾಮಾಜಿಕ ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಪಡೆದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 19 ಲಕ್ಷ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ನಾಪತ್ತೆಯಾಗಿವೆ. ಈ ಮತಯಂತ್ರಗಳು ಎಲ್ಲಿಗೆ ಹೋದವು...?

‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ’ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆ ಇವಿಎಂಗಳ ನಾಪತ್ತೆ ಹಾಗೂ ದುರ್ಬಳಕೆ ಕುರಿತ ಗಂಭೀರ ಜಿಜ್ಞಾಸೆಗೆ ಅವಕಾಶ ಒದಗಿಸಿತು.

ಇವಿಎಂಗಳು ದುರ್ಬಳಕೆಯಾಗಿರುವ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ, ‘ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಸಂಸ್ಥೆಯಿಂದ 9,64,270 ಹಾಗೂ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಇಸಿಐಎಲ್‌) ಸಂಸ್ಥೆಯಿಂದ 9,29,992 ಇವಿಎಂಗಳು ನಾಪತ್ತೆಯಾಗಿವೆ ಎಂದು ಮಾಹಿತಿ ಹಕ್ಕಿನಡಿ ಪಡೆಯಲಾದ ದಾಖಲೆಗಳು ಹೇಳುತ್ತಿವೆ. 2014–15ರಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ 62,183 ಇವಿಎಂಗಳನ್ನು ಪೂರೈಸಿರುವುದಾಗಿ ಬಿಇಎಲ್‌ ಹೇಳು
ತ್ತಿದೆ. ಆದರೆ, ಅವುಗಳು ತಲುಪಿಯೇ ಇಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಹಾಗಾದರೆ ಈ
ಇವಿಎಂಗಳು ಏನಾದವು’ ಎಂದು ಪ್ರಶ್ನಿಸಿದರು.

ADVERTISEMENT

‘ಈ ಬಗ್ಗೆ ಚುನಾವಣಾ ಆಯೋಗವೇ ಪ್ರತಿಕ್ರಿಯೆ ನೀಡಬೇಕು. ಯಾವುದೇ ಇವಿಎಂ ದುರ್ಬಳಕೆ ಆಗುತ್ತಿಲ್ಲ ಎಂಬುದನ್ನು ಆಯೋಗ ಸಾಬೀತುಪಡಿಸದೇ ಹೋದರೆ, ಈ ಕುರಿತ ಶಂಕೆಗಳು ಇನ್ನಷ್ಟು ಗಟ್ಟಿ
ಗೊಳ್ಳುತ್ತವೆ. ಚುನಾವಣಾ ಪ್ರಕ್ರಿಯೆ ಕುರಿತು ಜನರ ಸಂದೇಹಗಳನ್ನು ನಿವಾರಿಸುವ ಜವಾಬ್ದಾರಿ ಆಯೋಗದ ಮೇಲಿದೆ. ನಾನು ನೀಡಿರುವ ಮಾಹಿತಿ ತಪ್ಪಾಗಿದ್ದರೆ ಯಾವುದೇ ಶಿಕ್ಷೆಗೆ ಬೇಕಿದ್ದರೂ ಗುರಿಪಡಿಸಬಹುದು’ ಎಂದು ಎಚ್‌.ಕೆ.ಪಾಟೀಲ ಸವಾಲು ಹಾಕಿದರು.

‘ಈ ಹಿಂದೆ ಚುನಾವಣಾ ಆಯೋಗವೂ ಇವಿಎಂಗಳ ಅಸುರಕ್ಷಿತ ಎಂದು ಸಾಬೀತುಪಡಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿತ್ತು. ಆಗ ಯಾರೂ ಮುಂದೆ ಬಂದಿರಲಿಲ್ಲ’ ಎಂದು ಬಿಜೆಪಿಯ ಅರವಿಂದ ಬೆಲ್ಲದ ಹೇಳಿದರು.

‘ಇವಿಎಂಗಳನ್ನು ಪರೀಕ್ಷೆ ಮಾಡಲು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಿತ್ತು. ಆದರೆ ಅವುಗಳನ್ನು ಪರೀಕ್ಷೆಗೆ ಒಳಪಡಿಸುವ ತಂತ್ರಜ್ಞರು ರಾಜಕೀಯ ಪಕ್ಷದಲ್ಲಿಲ್ಲ. ಅದರ ಬದಲು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಂದ ಇದನ್ನು ಪರೀಕ್ಷೆಗೆ ಒಳಪಡಿಸಲಿ’ ಎಂದು ಒತ್ತಾಯಿಸಿದ ಪಾಟೀಲರು, ಈ ಬಗ್ಗೆ ಹೆಚ್ಚಿನ ಮಾಹಿತಿ ಪ್ರಿಯಾಂಕ್ ಖರ್ಗೆ ಬಳಿ ಇದೆ ಎಂದರು.

ಆಗ ಮಾತನಾಡಿದ ಕಾಂಗ್ರೆಸ್‌ನ ಪ್ರಿಯಾಂಕ್‌, ‘ಬಿಜೆಪಿಯವರೇ ಆದ ಜಿವಿಎಲ್‌ ನರಸಿಂಹ ರಾವ್‌ ಅವರು ಇವಿಎಂ ಹ್ಯಾಕಿಂಗ್ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ. ಚುನಾವಣಾ ಆಯೋಗವು ಇವಿಎಂನ ಲೋಪಗಳನ್ನು ಸಾಬೀತುಪಡಿಸುವಂತೆ ಸವಾಲೆಸೆದಾಗ ನಾನು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವನಾಗಿದ್ದೆ. ಲೋಪಗಳ ಬಗ್ಗೆ ಸರ್ಕಾರದಿಂದ ಎರಡು ಪತ್ರ ಬರೆದಿದ್ದೆವು. ಅದಕ್ಕೆ ಪ್ರತಿಯಾಗಿ ಇವಿಎಂ ನಿರ್ವಹಣೆಯ ಕೈಪಿಡಿಯನ್ನಷ್ಟೇ ಕಳುಹಿಸಿಕೊಟ್ಟ ಆಯೋಗವು ಸಂದೇಹಗಳಿಗೆ ಉತ್ತರ ನೀಡುವ ಗೋಜಿಗೇ ಹೋಗಿರಲಿಲ್ಲ’ ಎಂದರು.

‘ಚುನಾವಣಾ ಆಯೋಗಕ್ಕೆ ಸಮನ್ಸ್‌ ನೀಡಿ’

‘ಚುನಾವಣಾ ಆಯೋಗಕ್ಕೆ ಸಮನ್ಸ್‌ ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಚುನಾವಣಾ ಆಯೋಗದವರನ್ನು ಈ ಸದನಕ್ಕೆ ಕರೆಸಿ ಇವಿಎಂ ದುರ್ಬಳಕೆ ವಿಚಾರದಲ್ಲಿ ದೇಶದ ಸಂದೇಹ ನಿವಾರಿಸಿ ಸತ್ಯಸ್ಥಾಪನೆ ಮಾಡುವ ನಿರ್ಣಯವನ್ನು ಸಭಾಧ್ಯಕ್ಷರು ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್ ಕುಮಾರ್‌ ಒತ್ತಾಯಿಸಿದರು.

‘ನಮ್ಮ ದೇಶದಲ್ಲಿ ಚುನಾವಣಾ ಆಯೋಗವನ್ನು ಬಿಟ್ಟು ಬೇರೆ ಯಾರಿಗೂ ಇವಿಎಂಗಳನ್ನು ಪೂರೈಸಲುಬಿಇಎಲ್‌ನಂತಹ ಸಂಸ್ಥೆಗಳಿಗೆ ಅವಕಾಶವಿಲ್ಲ. ರಾಷ್ಟ್ರಪತಿಯವರಿಂದಲೇ ಪ್ರಮಾಣವಚನ ಸ್ವೀಕರಿಸುವ ಮುಖ್ಯ ಚುನಾವಣಾ ಆಯುಕ್ತರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಿದೆ. ಈ ಬಗ್ಗೆ ಸಭಾಧ್ಯಕ್ಷರು ಆಯೋಗಕ್ಕೆ ನೋಟಿಸ್ ನೀಡಿದರೆ ಇಡೀ ಸದನ ಅವರ ಪರ ನಿಲ್ಲಬೇಕು’
ಎಂದರು.

‘ನೈತಿಕ ಹ್ಯಾಕಥಾನ್‌ ನಡೆಸಲಿ’

‘ಇವಿಎಂ ಹ್ಯಾಕ್‌ ಮಾಡುವಂತೆ ರಾಜಕೀಯ ಪಕ್ಷಗಳನ್ನು ಕೇಳಿದರೆ ಪ್ರಯೋಜನವಿಲ್ಲ. ತಾಂತ್ರಿಕ ಜ್ಞಾನ ಇರುವವರೂ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಚುನಾವಣಾ ಆಯೋಗವು ಇವಿಎಂನ ಲೋಪಗಳ ಕುರಿತ ‘ನೈತಿಕ ಹ್ಯಾಕಥಾನ್‌’ ಏರ್ಪಡಿಸಲಿ. ಇವಿಎಂನಲ್ಲಿ ದೋಷಗಳಿರುವುದು ಅದರಲ್ಲಿ ಸಾಬೀತಾದರೆ ಅವುಗಳನ್ನು ಸರಿಪಡಿಸಿಕೊಳ್ಳಬಹುದು’ ಎಂದು ಪ್ರಿಯಾಂಕ್‌ ಖರ್ಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.