ಬೆಳಗಾವಿ: ಮುಂಬೈ ಸರ್ಕಾರವು 1907ರಲ್ಲಿ ಬೆಳಗಾವಿಯ ಶಿಂಧೋಳಿ ಗ್ರಾಮದ ಕಾಸೀಮ್‌ಸಾಬ್ ಇಮಾಮ್‌ಸಾಬ್ ಮುಲ್ಲಾ ಅವರಿಗೆ ಬಳುವಳಿಯಾಗಿ ನೀಡಿದ್ದ ಜಮೀನಿನ ಅಚ್ಚ ಕನ್ನಡದಲ್ಲಿರುವ ‘ಇನಾಮ್’ (ಬಕ್ಷೀಸ್) ಪತ್ರಿಕೆಯ ಉತಾರವು ಲಭ್ಯವಾಗಿದೆ.
ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಅಬ್ದುಲ್‌ಸಾಬ್ ಖಲಂದರಸಾಬ್ ಮುಲ್ಲಾ ಅವರ ಮುತ್ತಜ್ಜ ಕಾಸೀಮ್‌ಸಾಬ್ ಇಮಾಮ್‌ಸಾಬ್ ಮುಲ್ಲಾ ಅವರಿಗೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಮುಂಬೈ ಸರ್ಕಾರವು ಶಿಂಧೋಳಿ ಗ್ರಾಮದ ಜಮೀನು ರಿ.ಸ. ನಂ. 221ರ ಜಮೀನನ್ನು ಬಳುವಳಿಯಾಗಿ ನೀಡಿದ್ದ ದಾಖಲೆಯು ಅಚ್ಚ ಕನ್ನಡದಲ್ಲಿ ಅಂಕಿ– ಅಂಶಗಳ ಸಮೇತ ಇರುವುದು ಈ ಭಾಗದ ಕನ್ನಡಮಯ ವಾತಾವರಣಕ್ಕೆ ಪುಷ್ಟಿ ನೀಡಿದೆ ಎಂದು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ತೋಟಿಗೇರ ತಿಳಿಸಿದ್ದಾರೆ.
1907ರಲ್ಲಿ ನೀಡಿದ್ದ ಇನಾಮ್ ಪತ್ರಿಕೆ ಉತಾರವು ಬೆಳಗಾವಿಯಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲೇ ಕನ್ನಡ ಭಾಷೆಯು ಆಡಳಿತ ಭಾಷೆಯಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಈ ಪ್ರದೇಶವು ಸಂಪೂರ್ಣ ಕನ್ನಡಮಯ ಆಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಎದುರು ರಾಜ್ಯ ಸರ್ಕಾರವು ಈ ದಾಖಲೆಯನ್ನು ಪ್ರಸ್ತುತಪಡಿಸಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ವಾದ ಮಂಡಿಸಬೇಕು ಎಂದು ಕೋರುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.