ಬೆಂಗಳೂರು: ಪಹಣಿಯಲ್ಲಿನ ವಿವಿಧ ಕಾಲಂಗಳನ್ನು ತಾಳೆ ನೋಡಿ, ದೃಢೀಕರಿಸಲು ₹2 ಲಕ್ಷ ಪಡೆದಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ವಿಶೇಷ ತಹಶೀಲ್ದಾರ್ ನಾಗರಾಜ್ ವಿ. ಸೇರಿ ನಾಲ್ವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಉತ್ತರಹಳ್ಳಿ ಹೋಬಳಿಯ ಸುಂಕದಕಟ್ಟೆ ಗ್ರಾಮದ ಸರ್ವೆ ನಂಬರ್ 47ರಲ್ಲಿನ ತಮ್ಮ ಜಮೀನಿನ ಪಹಣಿಯ 3 ಮತ್ತು 9ನೇ ಕಾಲಂ ಅನ್ನು ತಾಳೆ ನೋಡಿ, ದೃಢೀಕರಿಸಲು ಗುರುಪ್ರಸಾದ್ ಎಂಬವರು ಅರ್ಜಿ ಸಲ್ಲಿಸಿದ್ದರು. ಪಹಣಿ ತಾಳೆ ಮತ್ತು ದೃಢೀಕರಣ ಕಾರ್ಯವನ್ನು ವಿಳಂಬ ಮಾಡಲಾಗಿತ್ತು. ಈ ಕೆಲಸ ಮಾಡಿಕೊಡಲು ಅಧಿಕಾರಿಗಳು ₹2.50 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಗುರುಪ್ರಸಾದ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ನಾಗರಾಜ್, ತಾಲ್ಲೂಕು ಕಚೇರಿಯ ಮ್ಯಾನೇಜರ್ ಮಂಜುನಾಥ್ ಮತ್ತು ಪ್ರಥಮ ದರ್ಜೆ ಸಹಾಯಕಿ ಶಿಲ್ಪಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿಲ್ಪಾ ಅವರೇ ಹೇಮಂತ್ ಎಂಬವರನ್ನು ಕಂಪ್ಯೂಟರ್ ಆಪರೇಟರ್ ಎಂದು ಪರಿಚಯ ಮಾಡಿಕೊಟ್ಟಿದ್ದು, ಲಂಚದ ಹಣ ಹೇಮಂತ್‌ಗೇ ನೀಡಬೇಕು ಎಂದು ಸೂಚಿಸಿದ್ದರು ಎಂದು ದೂರುದಾರರು ಆರೋಪಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಪೊಲೀಸರ ಸೂಚನೆಯಂತೆ, ಗುರುಪ್ರಸಾದ್ ಅವರು ಬುಧವಾರ ಮಧ್ಯಾಹ್ನ ತಾಲ್ಲೂಕು ಕಚೇರಿಯ ಆವರಣದಲ್ಲಿ ಹೇಮಂತ್ ಅವರಿಗೆ ₹2 ಲಕ್ಷ ನೀಡಿದ್ದರು. ಅದೇ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಗಂಗರುದ್ರಯ್ಯ ಅವರ ನೇತೃತ್ವದ ತಂಡವು ದಾಳಿ ನಡೆಸಿ, ಹೇಮಂತ್ ಅವರನ್ನು ಬಂಧಿಸಿತು. ಆರೋಪಿಯಿಂದ ₹2 ಲಕ್ಷ ವಶಕ್ಕೆ ಪಡೆಯಲಾಗಿತ್ತು. ಕಚೇರಿಯಲ್ಲಿ ಇದ್ದ ನಾಗರಾಜ್, ಶಿಲ್ಪಾ ಮತ್ತು ಮಂಜುನಾಥ್ ಅವರನ್ನು ವಿಚಾರಣೆ ನಡೆಸಿ, ಬಂಧಿಸಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ್ ಮಗದಮ್ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಅವರ ಮನೆಯಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರುಲೋಕಾಯುಕ್ತ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.