ಬೆಂಗಳೂರು: ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ (ಐಸಿಡಿಎಸ್) 2024-25ನೇ ಸಾಲಿನಲ್ಲಿ ಸಮವಸ್ತ್ರವಾಗಿ ಎರಡು ಸೀರೆ ವಿತರಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಈ ಯೋಜನೆಗೆ ₹13.75 ಕೋಟಿ ವೆಚ್ಚವಾಗಲಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕರ್ನಾಟಕ ಕೈಮಗ್ಗ ನಿಗಮದಿಂದ ಪ್ರತಿವರ್ಷ ಎರಡು ಸೀರೆಗಳನ್ನು ಖರೀದಿಸಿ ವಿತರಿಸಲಾಗುವುದು. 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವಿತರಿಸಲು ಒಟ್ಟು 2,75,018 ಸೀರೆ ಖರೀದಿಸಲಾಗುವುದು’ ಎಂದರು.
ಅಕ್ರಮ ಗಣಿಗಾರಿಕೆಯ ತನಿಖೆಗೆ ಲೋಕಾಯುಕ್ತದಲ್ಲಿ ಸೃಜಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಸಭೆ ಅನುಮೋದನೆ ನೀಡಿದೆ. ಕಬ್ಬಿಣದ ಗಣಿ ರಫ್ತು ಪ್ರಕರಣಗಳಿಗೆ ಸಂಬಂಧಿಸಿದ ಇನ್ನೂ 113 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಎರಡು ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಂಟು ಪ್ರಕರಣಗಳಲ್ಲಿ ಸಿಆರ್‌ಪಿಸಿ 173(8) ಅಡಿ ತನಿಖೆ ಬಾಕಿಯಿದ್ದು, ಅದಿರು ಮೌಲ್ಯಮಾಪನ ಸಮಿತಿಯ ವರದಿ ಬರಬೇಕಿದೆ. ಆರು ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಕಾರಣಕ್ಕೆ ಎಸ್‌ಐಟಿ ಅವಧಿಯನ್ನು ವಿಸ್ತರಿಸುವುದು ಸೂಕ್ತವೆಂದು ತೀರ್ಮಾನಿಸಲಾಯಿತು ಎಂದರು.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 43 ಅಪರಾಧ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯಲು ಕೂಡಾ ಸಚಿವ ಸಂಪುಟ ನಿರ್ಧರಿಸಿದೆ.
ಒಟ್ಟು 60 ಪ್ರಕರಣಗಳನ್ನು ಹಿಂಪಡೆಯುವ ಪ್ರಸ್ತಾವವನ್ನು ಸಭೆಗೆ ಗೃಹ ಇಲಾಖೆ ಮಂಡಿಸಿತ್ತು ಎಂದೂ ಎಚ್.ಕೆ. ಪಾಟೀಲ ತಿಳಿಸಿದರು.
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ಸಂಪೂರ್ಣ ಬಂಡವಾಳ ಹೂಡಿಕೆಯಲ್ಲಿ ಅಂದಾಜು ₹527.50 ಕೋಟಿ ಮೊತ್ತದಲ್ಲಿ ‘ರೇಷ್ಮೆ ಭವನ’ ನಿರ್ಮಿಸಲು ಅನುಮೋದನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಅಂದಾಜು ₹200 ಕೋಟಿ ಮೊತ್ತದಲ್ಲಿ ನಿರ್ಮಿಸಲು ಒಪ್ಪಿಗೆ
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಹೆಸರಿನಲ್ಲಿ ₹5 ಕೋಟಿ ಷೇರು ಬಂಡವಾಳದಲ್ಲಿ ಹೊಸ ಕಂಪೆನಿ ಸ್ಥಾಪನೆ
ರಾಜ್ಯ ಕಾನೂನು ಆಯೋಗಕ್ಕೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ಮುಖ್ಯಮಂತ್ರಿಗೆ ಅಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.