ADVERTISEMENT

ನಾಲಾ ನೀರು ಕದ್ದರೆ 2 ವರ್ಷ ಜೈಲು: ಮಸೂದೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:47 IST
Last Updated 22 ಜುಲೈ 2024, 15:47 IST
   

ಬೆಂಗಳೂರು: ನೀರಾವರಿ ನಾಲೆ, ಕಾಲುವೆಗಳಲ್ಲಿ ಕಾನೂನುಬಾಹಿರವಾಗಿ ಪಂಪ್‌ಸೆಟ್‌, ಕೊಳವೆ ಅಳವಡಿಸಿ ನೀರು ಕಳವು ಮಾಡುವುದನ್ನು ತಡೆಯುವ ಉದ್ದೇಶದ ‘ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ–2024’ ಅನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಿದರು.

ನಿಯಮ ಉಲ್ಲಂಘಿಸಿದರೆ ಎರಡು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ₹50 ಸಾವಿರದಿಂದ ₹2 ಲಕ್ಷವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಅಂಶ ಮಸೂದೆಯಲ್ಲಿದೆ.

ನೀರಾವರಿ ಯೋಜನೆಯ ನಾಲೆ, ಕಾಲುವೆಗಳಲ್ಲಿ ಅಕ್ರಮವಾಗಿ ನೀರು ಕಳವು ನಡೆಯುವುದರಿಂದ ನಾಲೆಗಳ ಕೊನೆಯ ಭಾಗಗಳಿಗೆ ನೀರು ತಲುಪುವುದಿಲ್ಲ ಎಂದು‌ ರೈತರು ಅಳಲು ತೋಡಿಕೊಂಡಿದ್ದರು. ಈ ಕಾರಣಕ್ಕೆ ಕಾಯ್ದೆ ತಿದ್ದುಪಡಿಗೆ ಸರ್ಕಾರ ಮಸೂದೆ ಮಂಡಿಸಿದೆ.

ADVERTISEMENT

ನೀರಾವರಿ ಕಾಲುವೆಯ ಮಧ್ಯಭಾಗದಿಂದ 500 ಮೀಟರ್‌ ಒಳಗೆ ಅಂತರ್ಜಲ ಬಳಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ನಾಲೆಯ ಮಧ್ಯಭಾಗದಿಂದ 500 ಮೀಟರ್‌ವರೆಗೆ ನಾಲೆಯ ಎರಡೂ ಕಡೆ ಬಾವಿ ಕೊರೆಯಲು, ಕೃತಕ ಕೊಳ ನಿರ್ಮಿಸಲು, ನೀರಿನ ಸಂಗ್ರಹ ವ್ಯವಸ್ಥೆ ರಚಿಸಲು ವಲಯ ಮುಖ್ಯ ಎಂಜಿನಿಯರ್‌ ಸೂಚಿಸಿದಂತೆ ಅರ್ಜಿ ಸಲ್ಲಿಸಬೇಕು. ಅನುಮತಿ ನೀಡಿದರಷ್ಟೇ ಮುಂದುವರಿಯಬೇಕು. ಅಂತರ್ಜಲ ಬಳಸಲು ಅನುಮತಿ ಪಡೆಯುವುದರಿಂದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ವಿನಾಯಿತಿ ನೀಡಿದ್ದರೂ ಆರು ತಿಂಗಳ ಒಳಗೆ ನೀರಾವರಿ ಅಧಿಕಾರಿಯಿಂದ ಕೊಳವೆಬಾವಿ ನೋಂದಣಿ ಮಾಡಿಕೊಳ್ಳಬೇಕು. ಕಾಲುವೆಯ ಮಧ್ಯಭಾಗದಿಂದ 500 ಮೀಟರ್‌ನೊಳಗೆ ಈಗಾಗಲೇ ಅಸ್ತಿತ್ವದಲ್ಲಿರುವ ಅಂತರ್ಜಲ ವ್ಯವಸ್ಥೆ ಬಗ್ಗೆ ಕಾಯ್ದೆ ಜಾರಿಯಾದ ದಿನದಿಂದ ಆರು ತಿಂಗಳ ಒಳಗೆ ನೋಂದಣಿ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು ಎಂದೂ ಮಸೂದೆಯಲ್ಲಿ ವಿವರಿಸಲಾಗಿದೆ.

ಅಪರಾಧಗಳ ನಿಯಂತ್ರಣಕ್ಕೆ ನೀರಾವರಿ ಅಧಿಕಾರಿಯು ಸೂಕ್ತವೆನಿಸಿದ ಪೊಲೀಸ್‌, ರಾಜ್ಯ ಕೈಗಾರಿಕಾ ಭದ್ರತಾ ದಳ ಅಥವಾ ಯಾವುದೇ ಏಜೆನ್ಸಿ ಅಥವಾ ಕಾರ್ಯಪಡೆಯ ನೆರವು ಪಡೆಯಬಹುದು. ಮೇಲ್ಮನವಿ ಅರ್ಜಿಗಳ ತ್ವರಿತ ವಿಲೇವಾರಿಗೆ ಆರು ತಿಂಗಳ ಕಾಲಾವಧಿ ನಿಗದಿಪಡಿಸುವ ಅಂಶವೂ ಮಸೂದೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.