ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ₹200 ಕೋಟಿ ಒದಗಿಸಲಾಗಿದೆ.
ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅನುಮೋದನೆ ನೀಡಿದ ಮೊತ್ತಕ್ಕೆ ಹೆಚ್ಚುವರಿಯಾಗಿ ಮಾಡಲಾದ ಮತ್ತು ಮಾರ್ಚ್ ಅಂತ್ಯದವರೆಗೆ ಮಾಡಲಾಗುವ ವೆಚ್ಚಕ್ಕೆ ಅನುಗುಣವಾಗಿ ₹4,078.85 ಕೋಟಿ ಮೊತ್ತದ ಎರಡನೇ ಹಾಗೂ ಅಂತಿಮ ಪೂರಕ ಅಂದಾಜಿಗೆ ವಿಧಾನಸಭೆ ಒಪ್ಪಿಗೆ ನೀಡಿದೆ.
ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮೊದಲನೇ ಪೂರಕ ಅಂದಾಜು ಮಂಡಿಸಲಾಗಿತ್ತು. ಅದಾದ ಬಳಿಕ ಮಾಡಲಾಗುವ ಖರ್ಚುಗಳನ್ನು ಎರಡನೇ ಪೂರಕ ಅಂದಾಜಿನಲ್ಲಿ ಮಂಡಿಸಲಾಗಿದೆ.
ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ, ಮಾಹಿತಿ ಶಿಕ್ಷಣ ಹಾಗೂ ಸಂವಹನ ವೆಚ್ಚಗಳಿಗಾಗಿ ಎರಡು ಬಾಬ್ತುಗಳಲ್ಲಿ ₹183.30 ಕೋಟಿ ಹಾಗೂ ₹16.70 ಕೋಟಿ ಒದಗಿಸಲಾಗಿದೆ. ಹಂಪಿ ಉತ್ಸವದ ಕಾರ್ಯಕ್ರಮಗಳಿಗಾಗಿ ₹8 ಕೋಟಿ ಒದಗಿಸಲಾಗಿದೆ. ಕರಾವಳಿ ತೀರದ ಮೀನುಗಾರಿಕಾ ಕೊಂಡಿ ರಸ್ತೆಗಳ ಅಭಿವೃದ್ಧಿ, ದುರಸ್ತಿ ಹಾಗೂ ನಿರ್ವಹಣೆಗಾಗಿ ₹23.43 ಕೋಟಿ ನೀಡಲಾಗಿದೆ.
ಶಾಸಕ ಬಸವರಾಜ ಬೊಮ್ಮಾಯಿ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ₹2 ಕೋಟಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರಿಶಿಷ್ಟ ಜಾತಿ ವಸತಿ ಶಾಲಾ, ಕಾಲೇಜುಗಳ ಕಟ್ಟಡ ನಿರ್ಮಾಣಕ್ಕಾಗಿ ₹50 ಕೋಟಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ₹5 ಕೋಟಿ, ಪರಿಶಿಷ್ಟ ಜಾತಿಗಳ ಅಭಿವೃದ್ಧಿಗಾಗಿ ₹75 ಕೋಟಿ, ಅಲ್ಪ ಸಂಖ್ಯಾತರ ಆಯೋಗದ ಕಚೇರಿಯ ನಿರ್ವಹಣೆಗಾಗಿ ₹2 ಕೋಟಿ ನಿಗದಿ ಮಾಡಲಾಗಿದೆ.
ವಿಧಾನಸಭಾ ಸದಸ್ಯರಿಗೆ ವಾಹನ ಖರೀದಿಸಲು ₹5 ಕೋಟಿ, ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಬಾಕಿ ಬಿಲ್‌ಗಳ ಪಾವತಿಗಾಗಿ ₹50 ಕೋಟಿ, ನೇಕಾರರ ವಿದ್ಯುತ್ ಮಗ್ಗಗಳಿಗೆ ಸರಬರಾಜು ಮಾಡಿದ ವಿದ್ಯುತ್ ಶುಲ್ಕದ ಬಾಕಿ ಪಾವತಿಗೆ ₹80 ಕೋಟಿ ನೀಡಲಾಗಿದೆ. ದೆಹಲಿಯ ಭಾರತ್ ಟೆಕ್ಸ್‌ಗೆ ತೆರಳಲು ₹3.10 ಕೋಟಿ, ಬಿಸಿಜಿ ಸಲಹಾ ಸಂಸ್ಥೆಗೆ ₹2 ಕೋಟಿ, ದಾವೋಸ್ ಸಮ್ಮೇಳನದ ಭೇಟಿಯ ಖರ್ಚಿನ ಬಾಕಿ ಪಾವತಿಗೆ ₹2.75 ಕೋಟಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.