ADVERTISEMENT

ಹಿನ್ನೋಟ 2018: ಸಿಹಿ, ಕಹಿ ನೆನಪುಗಳನ್ನು ಉಳಿಸಿಹೋದ ವರುಷ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:45 IST
Last Updated 29 ಡಿಸೆಂಬರ್ 2018, 19:45 IST
   

ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.

ಕಳೆದ ವರ್ಷ ನೆರೆ– ಬರ ಎರಡೂ ರೈತರ ಸ್ಥಿತಿಯನ್ನು ಹದಗೆಡಿಸಿವೆ. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬು ಹಣ ಪಾವತಿ ಆಗ್ರಹಿಸಿ ಬೆಳೆಗಾರರು ಬೆಳಗಾವಿ ಸುವರ್ಣಸೌಧದ ಮುಂದೆ ಭಾರಿ ಪ್ರತಿಭಟನೆ ನಡೆಸಿದರು. ಹೋರಾಟದ ಕಿಡಿ ಬೆಂಗಳೂರಿನವರೆಗೂ ವ್ಯಾಪಿಸಿತು.

ರೈತರನ್ನು ಸಂಕಟದಿಂದ ಪಾರು ಮಾಡಲು ಜೆಡಿಎಸ್ – ಕಾಂಗ್ರೆಸ್‌ ಮೈತ್ರಿ ಸರ್ಕಾರ ₹ 53 ಸಾವಿರ ಕೋಟಿ ಸಾಲಮನ್ನಾ ಘೋಷಿಸಿದೆ. ಸಾಲ ಮನ್ನಾ ನಡುವೆಯೂ ರೈತರ ಸರಣಿ ಆತ್ಮಹತ್ಯೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತು. ಈ ಮಧ್ಯೆಯೂ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭತ್ತದ ನಾಟಿ ಮಾಡಿ ಗಮನಸೆಳೆದರು.

ADVERTISEMENT

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 100, ಹಿಂಗಾರಿನಲ್ಲಿ 56 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ರಾಜ್ಯದಲ್ಲಿ 377 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆದರೆ, ಮಳೆಯ ರೌದ್ರನರ್ತನದಿಂದ ಕೊಡಗು ಕಂಗಾಲಾಗಿದೆ. ಈ ದುರಂತ ಅಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಲಾಗದಷ್ಟು ಸಂಕಷ್ಟ ತಂದಿಟ್ಟಿದೆ. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಗೀಡಾಗಿದೆ.

ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ, ಕೇಂದ್ರ ಸಾಹಿತ್ಯ ಅಕಾಡೆಮಿಗೆ ಕನ್ನಡಿಗರ ಸಾರಥ್ಯ, ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮ ಗೌರವ ಈ ವರ್ಷ ನಾಡಿನ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದೆ.

ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಕೂಗು ಜೋರಾದ ಕಾರಣ ಸರ್ಕಾರ ತಜ್ಞರ ಸಮಿತಿ ರಚಿಸಿತು. ಹಳದಿ, ಬಿಳಿ, ಕೆಂಪು ಬಣ್ಣ ಹಾಗೂ ರಾಜ್ಯದ ಲಾಂಛನ ಗಂಡಭೇರುಂಡ ಒಳಗೊಂಡ ನಾಡಧ್ವಜ ಮಾದರಿಯನ್ನು ಸಮಿತಿ ಅಂತಿಮಗೊಳಿಸಿತು. ಅದನ್ನು ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ. ನಾಡಗೀತೆಗೆ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತಜ್ಞರ ಜತೆ ಸಭೆ ನಡೆಸಿ, 2.20ನಿಮಿಷ ಸಮಯ ನಿಗದಿಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 1000 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಸಾಂಸ್ಕೃತಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ಟಿಪ್ಪು ಜಯಂತಿ ಆಚರಣೆ ಈ ವರ್ಷವೂ ವಿವಾದದ ಕೇಂದ್ರ ಬಿಂದುವಾಯಿತು. ರಾಜಕೀಯ ಕೆಸರೆರಚಾಟಕ್ಕೆ ವಸ್ತುವಾಯಿತು. ಸರ್ಕಾರ ಆಚರಿಸಿದ ಟಿಪ್ಪು ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗೈರಾಗುವ ಮೂಲಕ ಅಂತರ ಕಾಯ್ದುಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರಾವಧಿ ವಿಸ್ತರಣೆ ವಿಚಾರವಾಗಿ ಉಡುಪಿ ಜಿಲ್ಲೆ ಕೋಟಾದಲ್ಲಿ ಪರಿಷತ್‌ನ ಸರ್ವಸದಸ್ಯರ ವಿಶೇಷ ಸಭೆ ನಡೆಯಿತು. ಕಾರ್ಯಕಾರಿ ಸಮಿತಿಯ ಅವಧಿಯನ್ನು ಮೂರರಿಂದ ಐದು ವರ್ಷಕ್ಕೆ ಏರಿಸಿ ಪೂರ್ವಾನ್ವಯವಾಗುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು. ಈ ವಿವಾದ ಈಗ ನ್ಯಾಯಾಲಯದಲ್ಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜ್ಞಾನ ಪೀಠ ಪುರಸ್ಕೃತ ಸಾಹಿತಿ, ಕನ್ನಡಿಗ ಡಾ. ಚಂದ್ರಶೇಖರ ಕಂಬಾರರು ಆಯ್ಕೆಯಾದರು. ಆ ಮೂಲಕ, ಎರಡು ದಶಕದ ಬಳಿಕ ಕನ್ನಡಿಗರೊಬ್ಬರಿಗೆ ಅಧ್ಯಕ್ಷ ಸ್ಥಾನ ಲಭಿಸಿತು.

ಸರ್ಕಾರಕ್ಕೆ ‘ಧರ್ಮ’ ಸಂಕಟ

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನ ಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತು. ಈ ವರದಿ ಆದರಿಸಿ, ‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ (ಬಸವ ತತ್ವವನ್ನು ನಂಬುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ ಶಿಫಾರಸು. ಆದರೆ, ವರ್ಷಾಂತ್ಯದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ಬೇಡಿಕೆಗೆ ಕೇಂದ್ರದ ತಿರಸ್ಕಾರ.

ಬೆಚ್ಚಿ ಬೀಳಿಸಿದ ಮಹಾದುರಂತ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್‌ ಉರುಳಿ ಬಿದ್ದು 30 ಜನರು ದುರ್ಮರಣಕ್ಕೀಡಾದರು. ಡ್ರೈವರ್‌, ಕಂಡಕ್ಟರ್‌ ಸೇರಿ ನಾಲ್ವರು ಮಾತ್ರ ಬದುಕುಳಿದರು. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಮಂದಿ ಇನ್ನಿಲ್ಲವಾದರು. ಬಾಗಲಕೋಟೆಯ ಜಿಲ್ಲೆಯ ಮುಧೋಳದ ಸಕ್ಕರೆ ಕಾರ್ಖಾನೆಯ ಬಾಯ್ಲರ್‌ (ಇಪಿಪಿ) ಸ್ಫೋಟದಿಂದ ನಾಲ್ವರು ಮೃತಪಟ್ಟರು.

ಗೌರಿ ಲಂಕೇಶ್ ಹತ್ಯೆ– ದೋಷಾರೋಪ ಪಟ್ಟಿ ಸಲ್ಲಿಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 18 ಆರೋಪಿಗಳನ್ನು ಬಂಧಿಸಿದ್ದ ಎಸ್‌ಐಟಿ ತಂಡ, ನ್ಯಾಯಾಲಯಕ್ಕೆ 9,235 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿತು. ನ್ಯಾಯಾಲಯದಲ್ಲಿ ಸದ್ಯದಲ್ಲೇ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.

ನೀರಾವರಿ.....: ಕಾವೇರಿ ನೀರು ಹಂಚಿಕೆ ವಿವಾದ, ಕಾವೇರಿ ಪ್ರಾಧಿಕಾರ ರಚನೆ, ಮಹದಾಯಿ ನ್ಯಾಯಮಂಡಳಿ ತೀರ್ಪು ರಾಜ್ಯದ ಪಾಲಿಗೆ ಸಂತಸ ತಂದುವು. ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕೇಂದ್ರದ ಸೂಚನೆ ಮತ್ತೊಂದು ಖುಷಿಯ ವಿಚಾರ.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.