ಬೆಂಗಳೂರು: ರಾಜ್ಯದ ಜನರು ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ 2,06,773 ಲಕ್ಷ ಮೊಬೈಲ್‌ಗಳನ್ನು ಕೇಂದ್ರೀಯ ಉಪಕರಣ ಗುರುತು ನೋಂದಣಿ (ಸಿಇಐಆರ್) ವ್ಯವಸ್ಥೆ ಮೂಲಕ ಬ್ಲಾಕ್ ಮಾಡಲಾಗಿದ್ದು, ಈ ಪೈಕಿ 29,519 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
89,554 ಮೊಬೈಲ್‌ಗಳು ಇರುವ ಸ್ಥಳವನ್ನು ನೆಟ್‌ವರ್ಕ್ ಮೂಲಕ ಕರ್ನಾಟಕ ಪೊಲೀಸರು ಪತ್ತೆ ಮಾಡಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಮೊಬೈಲ್ ಜಪ್ತಿ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
‘ದೇಶದಲ್ಲಿ ಮಾರ್ಚ್ 12ರವರೆಗೆ 14,06,244 ಮೊಬೈಲ್‌ಗಳನ್ನು ಜನರು ಬ್ಲಾಕ್ ಮಾಡಿದ್ದಾರೆ. ಅದರಲ್ಲಿ 7,50,453 ಮೊಬೈಲ್‌ಗಳು ಇರುವ ಸ್ಥಳಗಳನ್ನು ಪತ್ತೆ ಮಾಡಲಾಗಿದೆ. 1,00,353 ಮೊಬೈಲ್‌ಗಳನ್ನು ಜಪ್ತಿ ಮಾಡಿ, ವಾರಸುದಾರರಿಗೆ ಒಪ್ಪಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ವಾಪಸು ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ತೆಲಂಗಾಣ ಹಾಗೂ ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ’ ಎಂದರು.
ಕಳೆದುಕೊಂಡ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಮಾಲೀಕರಿಗೆ ವಾಪಸು ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ದೂರ ಸಂಪರ್ಕ ಇಲಾಖೆಯು ಸಿಇಐಆರ್ ವ್ಯವಸ್ಥೆ ಜಾರಿಗೆ ತಂದಿದೆ. ಕರ್ನಾಟಕ ಪೊಲೀಸ್ ಇಲಾಖೆಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಜನರಿಂದ ದೂರುಗಳನ್ನು ಆಲಿಸಿ ಇತ್ಯರ್ಥಪಡಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.