ಬೆಂಗಳೂರು: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೇಲೆ ಗಂಭೀರವಾದ 21 ಪ್ರಕರಣಗಳು ಇದ್ದವು. ಸಿ.ಎಂ ಆದ ಬಳಿಕ ಏಕೆ ವಾಪಸ್ ಪಡೆದರು’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಬಿಲ್ಕಿಸ್‌ಬಾನು ಪ್ರಕರಣ ವಾಪಸ್ ಪಡೆದದ್ದು ಏಕೆ? ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳನ್ನೂ ಸನ್ಮಾನ ಮಾಡಿದ್ದು ಯಾರು? ಇಂತಹ ನಕಲಿ ದೇಶಭಕ್ತರು ಮಹಾತ್ಮ ಗಾಂಧಿ ಬಗ್ಗೆಯೂ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಟೀಕಿಸಿದರು.
‘ಪ್ರಲ್ಹಾದ ಜೋಶಿ ಇಂಡಿಯಾ ಗೇಟ್‌ಗೆ ಹೋಗಿ ನೋಡಲಿ. 57 ಸಾವಿರ ಹುತಾತ್ಮರ ಹೆಸರಿನಲ್ಲಿ 37 ಸಾವಿರ ಮಂದಿ ಅಲ್ಪಸಂಖ್ಯಾತರು, 17 ಸಾವಿರ ಹಿಂದೂಗಳ ಹೆಸರಿದೆ. ನಕಲಿ ದೇಶ ಭಕ್ತರು ಬೇರೆಯವರ ಬಗ್ಗೆ ಮಾತಾಡುವ ಬದಲು ಮಹದಾಯಿ ಸಮಸ್ಯೆ ಬಗೆಹರಿಸಲಿ, ಹುಬ್ಬಳ್ಳಿಯ ಅಭಿವೃದ್ಧಿಗೆ ಶ್ರಮಿಸಲಿ’ ಎಂದು ಸಲಹೆ ನೀಡಿದರು.
‘ಪ್ರಲ್ಹಾದ ಜೋಶಿ ಕೇಂದ್ರ ಸಚಿವರಾಗಿರುವುದು ದೇಶದ ದುರದೃಷ್ಟ, ಹಂತಕರಿಂದ ಸನ್ಮಾನ ಮಾಡಿಸಿಕೊಂಡಿರುವ ಅವರ ಮೇಲೆ ಯುಎಪಿಎ ಪ್ರಕರಣ ದಾಖಲಿಸಬೇಕು. ಕಾಂಗ್ರೆಸ್ ನಾಯಕರನ್ನು ನಕಲಿ ಗಾಂಧಿಗಳು ಎಂದು ಟೀಕಿಸುವ ಬಿಜೆಪಿಗರು ಮೊದಲು ನಾಥೂರಾಮ್ ಗೋಡ್ಸೆಯನ್ನು ಭಯೋತ್ಪಾದಕ ಎಂದು ಘೋಷಿಸಲಿ’ ಎಂದು ಸವಾಲೆಸೆದರು.
ಡಿ.ಜೆ. ಹಳ್ಳಿ ಪ್ರಕರಣ ವಾಪಸ್‌ಗೆ ಒತ್ತಾಯ
ಹುಬ್ಬಳ್ಳಿ ಪ್ರಕರಣ ವಾಪಸ್ ಪಡೆಯುವ ನಿರ್ಧಾರ ಮಾಡಿದಂತೆ ಡಿ.ಜೆ. ಹಳ್ಳಿ–ಕೆ.ಜಿ. ಹಳ್ಳಿ ಪ್ರಕರಣವನ್ನೂ ವಾಪಸ್ ಪಡೆಯಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು. ‘ಗಲಭೆಯಲ್ಲಿ ಆರೋಪಿಗಳಿಗಿಂತ ಹೆಚ್ಚಾಗಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ದೂರುಗಳಿವೆ. ಡಿ.ಜೆ. ಹಳ್ಳಿ–ಕೆ.ಜಿ. ಹಳ್ಳಿ ಗಲಭೆಯ ನಂತರ ಆರ್‌ಎಸ್‌ಎಸ್ ಮುಖಂಡರು ಸೂಚಿಸಿದ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ. ಬೆಂಗಳೂರಿನ ಜನಪ್ರತಿನಿಧಿಯಾಗಿ ಪ್ರಕರಣ ವಾಪಸ್ ಪಡೆಯುಲು ಒತ್ತಾಯಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.