ADVERTISEMENT

ನಷ್ಟದಲ್ಲಿ 21 ನಿಗಮ-ಮಂಡಳಿ, 1,003 ಪತ್ತಿನ ಸಂಘ: ಎಂ.ಟಿ.ಬಿ. ನಾಗರಾಜ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 22:03 IST
Last Updated 15 ಮಾರ್ಚ್ 2022, 22:03 IST
ಎಂ.ಟಿ.ಬಿ. ನಾಗರಾಜ್
ಎಂ.ಟಿ.ಬಿ. ನಾಗರಾಜ್   

ಬೆಂಗಳೂರು: ‘ರಾಜ್ಯದಲ್ಲಿ ಒಟ್ಟು 60 ನಿಗಮ-ಮಂಡಳಿಗಳಿದ್ದು, ಈ ಪೈಕಿ 34 ಲಾಭದಲ್ಲಿವೆ, 21 ನಷ್ಟದಲ್ಲಿವೆ’ ಎಂದು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.

ಕಾಂಗ್ರೆಸ್ಸಿನ ಕೆ. ಹರೀಶ್‌ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ‘ನಷ್ಟದಲ್ಲಿರುವ ನಿಗಮಗಳ ಪೈಕಿ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ ಲೂಮ್ಸ್‌ಗಳನ್ನು ವಿಲೀನಗೊಳಿಸುವಂತೆ ಸಾರ್ವಜನಿಕ ಉದ್ಯಮಗಳ ಸಮಿತಿ ಶಿಫಾರಸು ನೀಡಿದೆ. ಈ ಕುರಿತಂತೆ ಜವಳಿ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಇದೇ ಜ. 7ರಂದು ಸಮಿತಿ ರಚಿಸಲಾಗಿದೆ. ಸಾಧಕ ಭಾದಕಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ನಷ್ಟದಲ್ಲಿವೆ 1003 ಪತ್ತಿನ ಸಹಕಾರಿ ಸಂಘಗಳು: ‘ರಾಜ್ಯದಲ್ಲಿರುವ 5,783 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ 1,003 ನಷ್ಟದಲ್ಲಿವೆ ಎಂದು ಸಹಕಾರ ಸಚಿವಎಸ್.ಟಿ. ಸೋಮಶೇಖರ್ ಅವರು ಹೇಳಿದರು.

ADVERTISEMENT

ಬಿಜೆಪಿಯ ಹಣಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪ್ರಾಥಮಿಕ ಸಂಘ ಇರಬೇಕು ಎಂಬ ನಿಯಮವಿದೆ. ಹೊಸದಾಗಿ ನಿಯಮ ಬದಲಾವಣೆ ಮಾಡಿ, ಸಂಘ ಸ್ಥಾಪನೆಗೆ ಪ್ರತಿ ಐದು ಕಿಲೋ ಮೀಟರ್‌ ವ್ಯಾಪ್ತಿ ಹೊಂದಿರಬೇಕು, 600 ರೈತ ಕುಟುಂಬಗಳು ಇರಬೇಕು, 4 ಸಾವಿರ ಎಕರೆ ಸಾಗುವಳಿ ಭೂಮಿ ಹೊಂದಿರಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ರಾಜ್ಯದಲ್ಲಿ 4,780 ಸಂಘಗಳು ಲಾಭದಲ್ಲಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.