ಉಡುಪಿ: ‘ರಾಜ್ಯದ ವಿವಿಧೆಡೆ ಸಂಗ್ರಹಿಸಿದ ಮಾಹಿತಿ ಆಧರಿಸಿ 25 ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದ ವರದಿಯನ್ನು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಈಗಾಗಲೇ 17 ಜಾತಿಗಳಿಗೆ ಸಂಬಂಧಿಸಿ ಅಧ್ಯಯನ ವರದಿ ಸಿದ್ದಪಡಿಸಲಾಗಿದೆ. ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಡುಬಿ ಜಾತಿಯವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸುವುದು ಹಿಂದುಳಿದ ವರ್ಗಗಳ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಅನುಸೂಚಿತ ಬುಡಕಟ್ಟು ಎಂದು ಗುರುತಿಸುವ ಅಧಿಕಾರ ಆಯೋಗಕ್ಕೆ ಇದೆ. ಅದರಂತೆ, ಕುಡುಬಿ ಜಾತಿಯವರನ್ನು ಅನುಸೂಚಿತ ಬುಡಕಟ್ಟು ಜಾತಿ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ ಎಂದರು.
ಪಂಚಮಸಾಲಿ ಮೀಸಲಾತಿ ಕುರಿತಂತೆ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಆಯೋಗಕ್ಕೆ ಡಿ. 19ರ ಗಡುವು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಹೆಗ್ಡೆ, ‘ಮೀಸಲಾತಿ ಕುರಿತ ಮನವಿ, ಆದೇಶ, ವಾಸ್ತವಾಂಶದ ಪರಿಶೀಲನೆ ಮಾಡಿ ವರದಿ ನೀಡುವ ಜವಾಬ್ದಾರಿ ಸಾಂವಿಧಾನಿಕ ಸಂಸ್ಥೆ ಯಾಗಿರುವ ಆಯೋಗಕ್ಕೆ ಇದೆ’ ಎಂದರು.
ಚುನಾಯಿತ ಪ್ರತಿನಿಧಿಯಾದರೆ ಒಳ್ಳೆಯದು: ಅನೇಕ ಕೆಲಸಗಳಿಗಾಗಿ ಜನರು ಈಗಲೂ ತಮ್ಮ ಬಳಿ ಬರುತ್ತಾರೆ. ಚುನಾಯಿತ ಜನಪ್ರತಿನಿಧಿಯಾದರೆ ನೇರವಾಗಿ ಅವರ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದರು.
***
ಆಯೋಗದ ಅಧ್ಯಕ್ಷನಾಗಿ ರುವುದರಿಂದ ರಾಜಕೀಯ ಮಾತನಾಡುವುದಿಲ್ಲ. ಚುನಾವಣೆಗೆ ನಿಲ್ಲುವ ಸಂದರ್ಭ ಬಂದಲ್ಲಿ ರಾಜಿನಾಮೆ ನೀಡಿ ಈ ಬಗ್ಗೆ ನಿರ್ಧರಿಸುತ್ತೇನೆ.
- ಕೆ.ಜಯಪ್ರಕಾಶ್ ಹೆಗ್ಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.