ಕಲಬುರಗಿ: ‘ಶ್ರೀಶೈಲದಲ್ಲಿ ರಾಜ್ಯದ ಸುಮಾರು 25 ಲಕ್ಷ ಜನ ಭಕ್ತರು ಬೀಡುಬಿಟ್ಟಿದ್ದು, ಅವರನ್ನು ವಾಪಸ್ ಹೋಗು ಎಂದರೆ ತಕ್ಷಣಕ್ಕೆ ಹೋಗುವುದು ಅಸಾಧ್ಯ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕರ್ನಾಟಕ ಸರ್ಕಾರವು ಶ್ರೀಶೈಲದಲ್ಲಿಯ ರಾಜ್ಯದ ಭಕ್ತರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕಲಬುರಗಿ ಮತ್ತುಶ್ರೀಶೈಲ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.
ಯುಗಾದಿ ಮಹೋತ್ಸವದ ಅಂಗವಾಗಿ ಶ್ರೀಶೈಲದ ತಮ್ಮ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿರುವ ಸ್ವಾಮೀಜಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಆಂಧ್ರ ಸರ್ಕಾರ ಅಗತ್ಯಬಿದ್ದರೆ ಭದ್ರತೆಗಾಗಿ ಸೇನೆಯನ್ನು ಕರೆಸಬೇಕು ಎಂದು ಒತ್ತಾಯಿಸಿದರು.
‘ತಿಂಗಳಾನುಗಟ್ಟಲೇ ಕಾಲ್ನಡಿಗೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಲು ಬಂದಿರುವ ರಾಜ್ಯದ ಭಕ್ತರಿಗೆ ಈ ಘಟನೆ ಆತಂಕವನ್ನುಂಟು ಮಾಡಿದೆ. ರಾಜ್ಯದ ಭಕ್ತರಿಗೆ ನಮ್ಮ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದೇವೆ’ ಎಂದರು. ‘ಕರ್ನಾಟಕ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದಂತೆ ಕರ್ನಾಟಕ ಭವನವನ್ನು ಶ್ರೀಶೈಲದಲ್ಲಿ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ಇದರಿಂದ ರಾಜ್ಯದ ಭಕ್ತರು ನೆಮ್ಮದಿಯಿಂದ ಉಳಿದು ದರ್ಶನ ಪಡೆಯಲು ಅನುಕೂಲವಾಗುತ್ತದೆ’ ಎಂದು ಶ್ರೀಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.