ಬೆಂಗಳೂರು: ‘ಪರಿಶಿಷ್ಟ ಜಾತಿಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ₹ 25 ಲಕ್ಷ ಕಾಲೇಜು ಶುಲ್ಕ ನೀಡುವ ಯೋಜನೆಗೆ ಆದಾಯ ಮಿತಿ ವಿಧಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಸಮತಾವಾದ) ರಾಜ್ಯ ಘಟಕದ ಅಧ್ಯಕ್ಷ ಎಚ್. ಮಾರಪ್ಪ ಆಗ್ರಹಿಸಿದ್ದಾರೆ.
‘ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದು ನೀಟ್ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ಸಿಗದೆ, ಆಡಳಿತ ಮಂಡಳಿಯ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆಯುವ ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳಿಗೆ ₹ 25 ಲಕ್ಷ ಕಾಲೇಜು ಶುಲ್ಕ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಶೇ 95 ಅಂಕ ಪಡೆಯಬೇಕೆಂಬ ಷರತ್ತು ಸಡಿಲಿಸಿ, ಕನಿಷ್ಠ ಶೇ 80 ಅಂಕ ಪಡೆದವರಿಗೂ ಈ ಸೌಲಭ್ಯವನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಪಿಯುಸಿಯಲ್ಲಿ ಶೇ 95 ಅಂಕ ಪಡೆದ ಪರಿಶಿಷ್ಟ ಜಾತಿಯ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿತಿರುತ್ತಾರೆ. ಟ್ಯೂಷನ್ ಶುಲ್ಕ ನೀಡಿ ಓದಿರುವ ಈ ವಿದ್ಯಾರ್ಥಿಗಳು ಹೆಚ್ಚು ಆದಾಯದ, ಉನ್ನತ ಸ್ಥಾನಮಾನ ಹೊಂದಿರುವವರ ಮಕ್ಕಳಾಗಿರುತ್ತಾರೆ. ಕನ್ನಡ ಮಾಧ್ಯಮದಲ್ಲಿ ಕಲಿತ, ಅದರಲ್ಲೂ ಗ್ರಾಮೀಣ ಭಾಗದ, ಹಾಸ್ಟೆಲ್ ವಿದ್ಯಾರ್ಥಿಗಳು ಶೇ 95 ಅಂಕ ಪಡೆಯುವುದು ಕಷ್ಟ. ಹೀಗಾಗಿ, ಸರ್ಕಾರ ಘೋಷಿಸಿದ ಯೋಜನೆ ಹೆಚ್ಚು ಆದಾಯ ಇರುವ ಶ್ರೀಮಂತ ಮಕ್ಕಳ ಪಾಲಾಗಲಿದೆ. ಬಡ ಮಕ್ಕಳು ಈ ಯೋಜನೆಯಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಈ ಸೌಲಭ್ಯ ಪಡೆಯಲು ವಾರ್ಷಿಕ ₹ 5 ಲಕ್ಷದ ಆದಾಯ ಮಿತಿ ಹಾಕಬೇಕು ಎಂದು ಸಮಾಜ ಕಲ್ಯಾಣ ಸಚಿವರಿಗೆ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.