ADVERTISEMENT

ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ₹2,650 ಕೋಟಿ ಅವ್ಯವಹಾರ: ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 0:22 IST
Last Updated 11 ನವೆಂಬರ್ 2024, 0:22 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ತುಮಕೂರು: ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ಸುಮಾರು ₹2,650 ಕೋಟಿ ಅವ್ಯವಹಾರವಾಗಿದೆ. ಸುಮಾರು 45 ಸೌಹಾರ್ದ ಸಹಕಾರ ಸಂಸ್ಥೆಗಳು ಗ್ರಾಹಕರ ಹಣ ಮರಳಿಸದ ಸ್ಥಿತಿಯಲ್ಲಿವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.  

ನಗರದಲ್ಲಿ ಭಾನುವಾರ ನಡೆದ ವೈಶ್ಯ ಕೋ–ಆಪರೇಟಿವ್‌ ಬ್ಯಾಂಕ್‌ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅನಗತ್ಯ ಸ್ಪರ್ಧೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಲವಾರು ಬ್ಯಾಂಕ್‌ ವಿಲೀನವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳ ಅಸ್ತಿತ್ವ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕೆಲವು ಸಹಕಾರ ಸಂಸ್ಥೆಗಳು ಗ್ರಾಹಕರಿಂದ ಶೇ16ರಷ್ಟು ಬಡ್ಡಿ ಪಡೆದು ಶೋಷಿಸುತ್ತಿವೆ. ಇದನ್ನು ತಪ್ಪಿಸಬೇಕು ಎಂದು ರಾಜಣ್ಣ ಸಲಹೆ ಮಾಡಿದರು. ಹಣಕಾಸಿನ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಸಾಲ ವಸೂಲಿಗೆ ನೋಟಿಸ್‌ ಕೊಡಬಾರದು, ಗ್ರಾಹಕರ ಮೇಲೆ ಒತ್ತಡ ಹೇರಬಾರದು ಎಂದು ಹೇಳಿದರೆ ಇಡೀ ವ್ಯವಸ್ಥೆ ಹಾಳಾಗುತ್ತದೆ. ಸಂಸ್ಥೆಗಳ ನಿರ್ಧಾರಕ್ಕೆ ಆಡಳಿತ ವರ್ಗ ವಿರೋಧ ವ್ಯಕ್ತಪಡಿಸಬಾರದು. ಸರ್ಕಾರ ಸಹಕಾರ ಸಂಸ್ಥೆಗಳಿಗೆ ಮಾರಕ ವಾಗುವ, ಪ್ರಗತಿಗೆ ಅಡ್ಡಿಯಾಗುವ ಯಾವುದೇ ತೀರ್ಮಾನ ತೆಗೆದು ಕೊಳ್ಳಬಾರದು. ಸಾಲ ಪಡೆದವರು ಕಟ್ಟಿದರೆ ಆಯಿತು ಎಂದು ಉದಾಸೀನ ಮನಸ್ಥಿತಿ ತೋರಬಾರದು ಎಂದು ಸಲಹೆ ಮಾಡಿದರು.

ಉತ್ತಮ ಸಾಲಗಾರರನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಫೋರ್ಜರಿ ದಾಖಲೆ ಸಲ್ಲಿಸಿ ಸಾಲ ಪಡೆಯುವುದು ಹೆಚ್ಚಾಗುತ್ತಿದೆ. ಅಸಲಿಗಿಂತ ನಕಲಿ ದಾಖಲೆ ಬಹಳ ಚೆನ್ನಾಗಿರು ತ್ತವೆ. ನಕಲಿ ದಾಖಲೆ ಕಂಡು ಹಿಡಿಯುವುದು ಕಷ್ಟವಾಗುತ್ತಿದೆ. ಎಲ್ಲ ಸವಾಲು ಎದುರಿಸಿ ಬ್ಯಾಂಕ್‌ ನಡೆಸುವುದು ಸುಲಭದ ಕೆಲಸವಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.