ನಂಜನಗೂಡು: ತಾಲ್ಲೂಕಿನ ತಾಯೂರು ಗ್ರಾಮದ 800 ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮಿವರದರಾಜಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸುವ ವೇಳೆ ಶನಿವಾರ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಚಿತ್ರವಿರುವ 29 ಬೆಳ್ಳಿ ನಾಣ್ಯಗಳು ದೊರತಿವೆ.
ಗ್ರಾಮದ ಲಕ್ಷ್ಮಿವರದರಾಜಸ್ವಾಮಿ ದೇವಾಲಯ ಶಿಥಿಲಗೊಂಡಿದ್ದು, ₹ 3 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಅಡಿಪಾಯಕ್ಕಾಗಿ ಅಗೆಯುವಾಗ ಬೆಳ್ಳಿ ನಾಣ್ಯಗಳು ಕಂಡು ಬಂದಿವೆ. ಗ್ರಾಮಸ್ಥರು ಬೆಳ್ಳಿ ನಾಣ್ಯ ದೊರೆತಿರುವ ವಿಷಯವನ್ನು ಬಿಳಿಗೆರೆ ಪೊಲೀಸ್ ಠಾಣೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಒಟ್ಟು 29 ನಾಣ್ಯಗಳು ದೊರೆತಿವೆ. ದೇಗುಲದಲ್ಲಿ ದೊರೆತಿರುವ ನಾಣ್ಯಗಳು 18ನೇ ಶತಮಾನದ ಬೆಳ್ಳಿ ನಾಣ್ಯಗಳು ಎಂದು ತಿಳಿದುಬಂದಿದ್ದು, ನಾಣ್ಯದ ಒಂದು ಭಾಗದಲ್ಲಿ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿ ಚಿತ್ರ ಅಚ್ಚುಹಾಕಲಾಗಿದೆ ಪೊಲೀಸರು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಣ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯದ ಅನುಮತಿ ಪಡೆದು ಪುರತತ್ವ ಇಲಾಖೆಗೆ ಹಸ್ತಾಂತರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.