ನವದೆಹಲಿ: ವಿಮಾನ ನಿಲ್ದಾಣಗಳ ಮೂಲಕ ಅಕ್ರಮವಾಗಿ ಅಡಿಕೆ ಸಾಗಣೆ ಮಾಡುತ್ತಿದ್ದ 16 ಪ್ರಕರಣಗಳನ್ನು ಪತ್ತೆ ಹಚ್ಚಿ 29.48 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.
ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಸಂಸದರಾದ ಡಿ.ಕೆ. ಸುರೇಶ್ ಹಾಗೂ ನಳಿನ್ ಕುಮಾರ್ ಕಟೀಲು ಕೇಳಿರುವ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಈ ಉತ್ತರ ನೀಡಿದ್ದಾರೆ.
‘2021–22 ಹಾಗೂ 2022–23ರ ಅವಧಿಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿಯ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ₹1.08 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದೆ. ಈ ಆರ್ಥಿಕ ವರ್ಷದಲ್ಲಿ ನವೆಂಬರ್ ತಿಂಗಳಿನ ತನಕ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ತನಿಖಾ ತಂಡವು ಅಡಿಕೆಯ ಅಕ್ರಮ ಸಾಗಣೆ ಮೇಲೆ ನಿಗಾ ಇಟ್ಟಿದೆ. ದೇಶದ ರೈತರ ಹಿತ ರಕ್ಷಿಸಲು ಬದ್ಧವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.