ADVERTISEMENT

ಪಂಚಮಸಾಲಿಗೆ 2ಎ ಮೀಸಲಾತಿಗೆ ಕಾನೂನಿನಂತೆ ಕ್ರಮ: ಸಿದ್ದರಾಮಯ್ಯ

ಬಸವಜಯ ಮೃತ್ಯುಂಜಯ ಸ್ವಾಮೀಜಿ ನೆತೃತ್ವದ ನಿಯೋಗಕ್ಕೆ ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 9:33 IST
Last Updated 18 ಅಕ್ಟೋಬರ್ 2024, 9:33 IST
   

ಬೆಂಗಳೂರು: ‘ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ–2ಎ ಅಡಿಯಲ್ಲಿ ಮೀಸಲಾತಿ ನೀಡಬೇಕು’ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಿವರಾಜ ತಂಗಡಗಿ ಇದ್ದ ಸಭೆಯಲ್ಲಿ ನಿಯೋಗವು ತನ್ನ ಬೇಡಿಕೆ ಇರಿಸಿದೆ. 

‘ಪಂಚಮಸಾಲಿ ಸಮುದಾಯ ಈಗ ಪ್ರವರ್ಗ-3ಬಿ ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸವಲತ್ತು ಪಡೆಯುತ್ತಿವೆ. ಮೀಸಲಾತಿ ಸಿಗದೇ ಇರುವ ಕಾರಣ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕು’ ಎಂದು ನಿಯೋಗವು ವಿವರಿಸಿದೆ.

ADVERTISEMENT

ನಿಯೋಗದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರ್ಕಾರದ ನಿಲುವು’ ಎಂದಿದ್ದಾರೆ.

ಶಾಸಕರುಗಳಾದ ವಿನಯ್ ಕುಲಕರ್ಣಿ, ವಿಜಯ್ ಕಾಶಪ್ಪನವರ್, ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು, ಸಮುದಾಯದ 40ಕ್ಕೂ ಹೆಚ್ಚು ಮುಖಂಡರು, ವಕೀಲರು ಸಭೆಯಲ್ಲಿ ಇದ್ದರು.

ತಕ್ಷಣಕ್ಕೆ ಸಾಧ್ಯವಿಲ್ಲ: ಸಿ.ಎಂ

‘ಮೀಸಲಾತಿ ನೀಡಲು ಸಂವಿಧಾನದ ಆಶಯಕ್ಕೆ ಬದ್ಧವಾಗಿ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ನೀತಿ ಸಂಹಿತೆ ಕಾರಣದಿಂದ ತಕ್ಷಣಕ್ಕೆ ನಿರ್ಧಾರ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ತಿಳಿಸಿದ್ದಾರೆ. ‘ಹಿಂದಿನ ಸರ್ಕಾರವು 2ಸಿ ಮತ್ತು 2ಡಿ ಎಂಬ ಹೊಸ ಪ್ರವರ್ಗ ರಚಿಸಿ 3ಎನಲ್ಲಿರುವ ಒಕ್ಕಲಿಗರನ್ನು 2ಸಿಗೆ 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಇರಿಸಿತ್ತು. ಮುಸ್ಲಿಮರ ಮೀಸಲಾತಿ ತೆಗೆದುಹಾಕಿತ್ತು. ಇದನ್ನು ಮುಸ್ಲಿಮರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ ಎಂದು ಅದೇ ಸರ್ಕಾರ ಹೇಳಿತ್ತು. ನ್ಯಾಯಾಲಯದಲ್ಲಿರುವ ಆ ವಿಚಾರಕ್ಕೆ ಸಂಬಂಧಿಸಿದಂತೆಯೂ ಕ್ರಮ ಸಾಧ್ಯವಿಲ್ಲ’ ಎಂದು ನಿಯೋಗಕ್ಕೆ ಹೇಳಿದ್ದಾರೆ.

ಜಾರಿಗೆ ಗಡುವು: ಸ್ವಾಮೀಜಿ

‘ಮೀಸಲಾತಿ ನೀಡುವ ಸಂಬಂಧ ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಾಲಮಿತಿಯಲ್ಲಿ ಮೀಸಲಾತಿ ಒದಗಿಸದೇ ಇದ್ದರೆ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಟ್ರ್ಯಾಕ್ಟರ್‌ ರ‍್ಯಾಲಿ ನಡೆಸುತ್ತೇವೆ’ ಎಂದಿದ್ದಾರೆ.

ಕಾಲಮಿತಿಯಲ್ಲಿ ಸಾಧ್ಯವಿಲ್ಲ: ಡಿಸಿಎಂ

‘ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯ ನ್ಯಾಯಾಲಯದಲ್ಲಿದೆ. ಹೀಗಿದ್ದೂ ಹೋರಾಟ ಮಾಡುತ್ತೇವೆ ಎಂದರೆ ಅವರಿಗೆ ಏನು ಹೇಳುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಅವರ ಕಳಕಳಿ ನಮಗೆ ಅರ್ಥವಾಗುತ್ತದೆ. ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರುಗಳಿಗೆ ಗೌರವಯುತವಾಗಿ ಹೇಳಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.