ADVERTISEMENT

2ನೇ ವಿಮಾನ ನಿಲ್ದಾಣ | ಚರ್ಚಿಸಿ ತೀರ್ಮಾನ: ಎಂ‌.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 19:14 IST
Last Updated 7 ಜುಲೈ 2024, 19:14 IST
   

ಬೆಂಗಳೂರು: ‘ರಾಜ್ಯದ ರಾಜಧಾನಿಯ ಸಮೀಪ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವಾಗಿದ್ದು, ಇದನ್ನು ಎಲ್ಲಿ‌ ನಿರ್ಮಿಸಬೇಕು ಎನ್ನುವ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಮುಖ್ಯಮಂತ್ರಿ ಜತೆ ವಿಚಾರವಿನಿಮಯ ನಡೆಸಿ ತೀರ್ಮಾನಿಸಲಾಗುವುದು’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಎರಡನೇ ವಿಮಾನ ನಿಲ್ದಾಣ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್ ಜತೆ ಚಾಲ್ತಿಯಲ್ಲಿರುವ ಒಪ್ಪಂದದ ಪ್ರಕಾರ 2033ರವರೆಗೂ 150 ಕಿ.ಮೀ. ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಬಾರದು ಎಂಬ ಷರತ್ತಿದೆ. ನಾವು ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು’ ಎಂದರು.

‘ಬೆಂಗಳೂರಿನ ದಕ್ಷಿಣ ಭಾಗ, ಕನಕಪುರ ಕಡೆಯಿಂದ ಪ್ರಯಾಣಿಕರ ಒತ್ತಡವಿದೆ. ಈಗಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ನೂತನ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದಾದರೆ ಡಾಬಸಪೇಟೆ, ತುಮಕೂರನ್ನು ಆಯ್ಕೆ ಮಾಡಬೇಕಾಗುತ್ತದೆ. ಎಲ್ಲ ವಿಷಯವನ್ನು ಪರಿಗಣಿಸಿ ಸ್ಥಳ ನಿಗದಿ, ಭೂ ಸ್ವಾಧೀನ, ಪರಿಹಾರ ಹಂಚಿಕೆ ಇತ್ಯಾದಿಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದರು.

ADVERTISEMENT

‘ಮುಂಬೈ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳ ನಡುವೆ ಕೇವಲ 36 ಕಿ.ಮೀ. ಅಂತರವಿದೆ. ನ್ಯೂಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ಕೂಡ ಹೆಚ್ಚು ದೂರವಿಲ್ಲ. ಜೊತೆಗೆ, ಬಿಐಎಎಲ್ ಹೊಂದಿರುವ ಷರತ್ತು ತಮಿಳುನಾಡಿಗೂ ಅನ್ವಯಿಸುತ್ತದೋ ಇಲ್ಲವೋ ಪರಿಶೀಲಿಸಬೇಕು’ ಎಂದು ಅವರು ವಿವರಿಸಿದರು.

‘ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಮೇಲೆ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಹೇಳುತ್ತಿದೆ. ಇದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಾಗುವುದು’ ಎಂದೂ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.