ಬೆಂಗಳೂರು: ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ವಾರದಲ್ಲಿ ಅಂತಿಮ ನಿರ್ಧಾರಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಎರಡನೇ ವಿಮಾನ ನಿಲ್ದಾಣ ರೂಪುರೇಷೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಇದರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
ಸಭೆಯ ನಂತರ ಮಾತನಾಡಿದ ಎಂ.ಬಿ. ಪಾಟೀಲ, ‘ದಾಬಸ್‌ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಬಳಿ ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನೊಂದು ಸ್ಥಳದ ಬಗ್ಗೆಯೂ ಚರ್ಚೆ ನಡೆದಿದೆ. ವಸ್ತುಸ್ಥಿತಿ ಆಧರಿಸಿ, ಸಾಧಕ-ಬಾಧಕ ಗಮನಿಸಿ, ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವಾರ ಮತ್ತೊಂದು ಸಭೆ ಕರೆದು ಸ್ಥಳವನ್ನು ಆಯ್ಕೆ ಮಾಡಲಾಗುವುದು’ ಎಂದರು.
‘ರಾಜಕೀಯ ಹಿತಾಸಕ್ತಿ ಆಧಾರದಲ್ಲಿ ಸ್ಥಳ ಆಯ್ಕೆ ನಡೆದಿಲ್ಲ. ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲ ಪರಿಗಣಿಸಿದ್ದೇವೆ. ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಅಂತಿಮವಾಗಿ ಬೆಂಗಳೂರು ನಗರ ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದೇ ಆದ್ಯತೆಯಾಗಿದೆ’ ಎಂದು ತಿಳಿಸಿದರು.
ಮೆಟ್ರೊ ಕೇಳಿರುವ ಜಾಗ ಖಾಸಗಿಯದು: ಮೆಟ್ರೊ ರೈಲು ಸಂಸ್ಥೆ ಹೆಬ್ಬಾಳದ ಬಳಿ ಬಹುಮಾದರಿ ಸಾರಿಗೆ ಜಂಕ್ಷನ್ ರೂಪಿಸಲು 45 ಎಕರೆ ಜಾಗ ಕೇಳಿದೆ. ಆದರೆ, ಆ ಜಾಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶದಲ್ಲಿಲ್ಲ. 2001ರಲ್ಲೇ ‘ಸಿಂಗಲ್ ಯೂನಿಟ್ ಕಾಂಪ್ಲೆಕ್ಸ್’ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.