ಬೆಂಗಳೂರು: ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್ ಮಿತ್ರಕೂಟ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುವತ್ತ ಚಿತ್ತ ಹರಿಸಿವೆ.
ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ಮುಂದಾಗಿರುವ ಮೈತ್ರಿ ನಾಯಕರು ಶನಿವಾರ ಸಭೆ ನಡೆಸಿ, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸುವ ಶಪಥ ಮಾಡಿದ್ದಾರೆ.ಅತ್ತ ಶಿಗ್ಗಾವಿ ಕ್ಷೇತ್ರದಲ್ಲಿನ ಬಂಡಾಯ ಶಮನಕ್ಕೆ ಕಾಂಗ್ರೆಸ್ ನಾಯಕರು ದಿನವಿಡೀ ಕಸರತ್ತು ನಡೆಸಿದರು.
ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸೈಯದ್ ಅಜ್ಜಂಪೀರ್ ಖಾದ್ರಿ ಅವರನ್ನು ಶುಕ್ರವಾರ ರಾತ್ರಿಯೇ ಸ್ವತಃ ಬೆಂಗಳೂರಿಗೆ ಕರೆ ತಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸಿದರು.
ಬಳಿಕ ಖಾದ್ರಿ ನಾಮಪತ್ರ ಹಿಂಪಡೆ ಯಲು ಒಪ್ಪಿದರು. ಆದರೆ, ಇನ್ನೊಬ್ಬ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಂಜುನಾಥ ಕುನ್ನೂರ್ ಅವರ ಬಂಡಾಯ ಶಮನವಾಗಿಲ್ಲ. ಸಂಡೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ವೆಂಕಣ್ಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ನಾಮಪತ್ರ ವಾಪಸ್ ಪಡೆಯುವರು ಎಂದು ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ: ನಿಖಿಲ್ ಗೆಲುವಿಗೆ ಬಿಜೆಪಿ ಪಣ
ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಶನಿವಾರ ಬಿಜೆಪಿ ಕಾರ್ಯಾಲಯದಲ್ಲಿ ಚನ್ನಪಟ್ಟಣ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರ ಸಭೆ ನಡೆಯಿತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಸಿ.ಎನ್. ಅಶ್ವತ್ಥನಾರಾಯಣ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಹಲವು ನಾಯಕರು ಹಾಗೂ ಅಭ್ಯರ್ಥಿ ನಿಖಿಲ್ ಹಾಗೂ ಜೆಡಿಎಸ್ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಮಂಜಣ್ಣ ಸಹ ಉಪಸ್ಥಿತರಿದ್ದರು.
ಸಭೆಯ ನಂತರ ಮಾತನಾಡಿದ ವಿಜಯೇಂದ್ರ, ‘ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲ್ಲುವಂತೆ ಕಾರ್ಯತಂತ್ರ ರೂಪಿಸಲು ಸಭೆ ನಡೆಸಿದ್ದೇವೆ. ನಿಖಿಲ್ ಅವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಹಗಲು–ರಾತ್ರಿ ಶ್ರಮಿಸಿ ಗೆಲ್ಲಿಸುವ ಭರವಸೆ ಕೊಟ್ಟಿದ್ದೇವೆ’ ಎಂದರು.
‘ಮೂರು ಕ್ಷೇತ್ರಗಳ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಿದ್ದೇವೆ. ಶಿಗ್ಗಾವಿ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಗೆದ್ದಿರುವ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲೂ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಜೆಡಿಎಸ್ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ. ದೇವೇಗೌಡರು ಹಾಗೂ ತಂದೆ ಕುಮಾರಸ್ವಾಮಿ ಅವರು ಸ್ಥಳದಲ್ಲೇ ಇದ್ದು ಪ್ರಚಾರ ನಡೆಸಲು ಮುಂದಾಗಿರುವುದು ಇನ್ನಷ್ಟು ಬಲ ತಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.