ADVERTISEMENT

3 ಗಂಟೆ ಶಾಸಕರ ಅರ್ಜಿ ವಿಚಾರಣೆ: ಮೂವರ ವಾದ–ಪ್ರತಿವಾದ

ಸುಪ್ರೀಂ ಕೋರ್ಟ್‌ ಅಧಿಕಾರದ ಪ್ರಶ್ನೆ; ಸಿ.ಜೆ ರಂಜನ್‌ ಗೊಗೊಯಿ ಮರುಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 20:15 IST
Last Updated 16 ಜುಲೈ 2019, 20:15 IST
..
..   

ನವದೆಹಲಿ: ‘ರಾಜೀನಾಮೆ ಸ್ವೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯ ಸುದೀರ್ಘ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ದೇಶದ ಗಮನ ಸೆಳೆದಿರುವ ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠದೆದುರು ನಡೆದ ವಾದ ಮಂಡನೆ ಮತ್ತು ವಿಚಾರಣೆ ಹೀಗಿದೆ.

ಮುಕುಲ್ ರೋಹಟ್ಗಿ-ಶಾಸಕರ ಪರ ವಕೀಲ

*ರಾಜೀನಾಮೆಯು ಸ್ವಯಂ ಪ್ರೇರಣೆಯಿಂದ ಕೂಡಿದೆಯೇ ಎಂಬುದನ್ನು ಅರಿಯುವುದು ಸ್ಪೀಕರ್ ವಿವೇಚನೆಗೆ ಸೀಮಿತ

ADVERTISEMENT

*ಸ್ವಇಚ್ಛೆಯಿಂದ ರಾಜೀನಾಮೆ ನೀಡಲಾಗಿದೆ ಎಂದು ಶಾಸಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರೂ ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವ ಸ್ಪೀಕರ್ ಅಸಂಬದ್ಧವಾಗಿ ವರ್ತಿಸುತ್ತಿದ್ದಾರೆ

* ರಾಜೀನಾಮೆ ಶಾಸಕರ ಮೂಲಭೂತ ಹಕ್ಕು. ಸಂವಿಧಾನದ 190 ನೇ ವಿಧಿಯ ಅನ್ವಯ ಸದಸ್ಯತ್ವ ರದ್ದುಗೊಳಿಸುವಂತಹ ತಪ್ಪು ನಡೆದಿಲ್ಲ

* ರಾಜೀನಾಮೆ ಅರ್ಜಿಯೊಂದಿಗೆ ಅನರ್ಹತೆ ಅರ್ಜಿಯನ್ನು ಥಳಕು ಹಾಕುವುದು ಬೇಡ. ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದೂ ಸರಿಯಲ್ಲ

* ಅನರ್ಹತೆಯ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ

* ಕಾಲಮಿತಿಯಲ್ಲಿ ರಾಜೀನಾಮೆಯ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್‌ಗೆ ಆದೇಶಿಸುವ ಸಂಪೂರ್ಣ ಅಧಿಕಾರಸುಪ್ರೀಂ ಕೋರ್ಟ್‌ಗೆ ಇದೆ

*ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು ಎಂದು ಸಂವಿಧಾನದ 190ನೇ ವಿಧಿ ಹೇಳುತ್ತದೆ. ಸ್ಪೀಕರ್ ಇದಕ್ಕೆ ಬದ್ಧವಾಗಿರಬೇಕು

*ಸಂವಿಧಾನದ ಪರಿಚ್ಛೇದ 10ಕ್ಕೂ ರಾಜೀನಾಮೆಗೂ ಸಂಬಂಧವಿಲ್ಲ. ಈ ಮೂಲಕ ಒತ್ತಾಯಪೂರ್ವಕವಾಗಿ ಸರ್ಕಾರದ ಪರ ಮತ ಹಾಕುವಂತೆ ಹೇಳಲಾಗುತ್ತಿದೆ

ರಂಜನ್‌ ಗೊಗೊಯಿ - ಮುಖ್ಯ ನ್ಯಾಯಮೂರ್ತಿ

*ಶಾಸಕರು ಖುದ್ದಾಗಿ ಸ್ಪೀಕರ್‌ ಎದುರು ರಾಜೀನಾಮೆ ನೀಡಿದ್ದಾರೆ. ಆ ಕುರಿತು ನಿರ್ಧಾರ ಕೈಗೊಳ್ಳಲು ಯಾಕೆ ವಿಳಂಬ?

*ಸ್ವಯಂ ಪ್ರೇರಿತ ರಾಜೀನಾಮೆಯನ್ನು ಗೌರವಿಸಬೇಕು

*ನಮ್ಮ ವ್ಯಾಪ್ತಿಯನ್ನು ಪ್ರಶ್ನಿಸುವುದು ಸರಿಯಲ್ಲ. ಅನರ್ಹತೆ ಅರ್ಜಿ ಕುರಿತು ನಿರ್ಧಾರ ಕೈಗೊಳ್ಳಬೇಡಿ ಎಂದು ನ್ಯಾಯಪೀಠ ಹೇಳಿಲ್ಲ. ಆದರೆ, ರಾಜೀನಾಮೆ ಬಗ್ಗೆ ಮೊದಲು ನಿರ್ಧರಿಸಿ ಎಂದು ಸೂಚಿಸಲಾಗಿದೆ

*ಕರ್ನಾಟಕದ ವಿಧಾನಸಭೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕಳೆದ ವರ್ಷ ಇದೇ ನ್ಯಾಯಾಲಯದ ಮೊರೆ ಹೋಗಿದ್ದ ನೀವು ವಿಶ್ವಾಸಮತಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದೀರಿ. ಈಗ ವ್ಯತಿರಿಕ್ತ ನಿಲುವು ತಾಳಿರುವುದು ಎಷ್ಟು ಸೂಕ್ತ?

ಅಭಿಷೇಕ್ ಸಿಂಘ್ವಿ-ಸ್ಪೀಕರ್‌ ಪರ ವಕೀಲ

*ಇದುವರೆಗೆ 11 ಶಾಸಕರು ಸ್ಪೀಕರ್ ಎದುರು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ ನಾಲ್ವರು ಖುದ್ದು ಹಾಜರಾಗಿ ರಾಜೀನಾಮೆ ನೀಡಿಲ್ಲ

* ಅರ್ಜಿದಾರರ ಪರ ವಕೀಲರು ಸಂವಿಧಾನದ ಆಶಯವನ್ನು ಸಮರ್ಪಕವಾಗಿ ವ್ಯಾಖ್ಯಾನಿಸಿಲ್ಲ. ಸಂವಿಧಾನದ ೧೬೪(೧)(ಬಿ) ಕುರಿತು ಅವರು ಪ್ರಸ್ತಾಪವನ್ನೇ ಮಾಡಿಲ್ಲ

* ಸಂವಿಧಾನದ ಪರಿಚ್ಛೇದ 10 (ಪಕ್ಷಾಂತರ)ರ ಕುರಿತೂ ನ್ಯಾಯಪೀಠಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಇನ್ನೂ ಅನೇಕ ವಿಷಯಗಳನ್ನು ಮರೆಮಾಚಲಾಗಿದೆ

*ಅನರ್ಹತೆ ಕುರಿತ ದೂರನ್ನು ನೀಡಲು ಏನು ಕಾರಣ ಎಂಬುದು ಮುಖ್ಯವಾದದ್ದು. ಸಮಯ–ಸಂದರ್ಭ ಆಧರಿಸಿ ಅನರ್ಹತೆ ಪ್ರಶ್ನೆ ಉದ್ಭವವಾಗುವುದಿಲ್ಲ. ಹಾಗಾಗಿ, ರಾಜೀನಾಮೆಯೇ ಅಪ್ರಸ್ತುತ

* ಅನರ್ಹತೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜೀನಾಮೆ ನೀಡಲಾಗಿದೆ. ಸ್ಪೀಕರ್ ಈ ಕುರಿತ ನಿರ್ಧಾರ ಕೈಗೊಳ್ಳುವ ಮೊದಲು ನ್ಯಾಯಾಲಯ ಮಧ್ಯ ಪ್ರವೇಶಿಸುವಂತಿಲ್ಲ

* ಅನರ್ಹತೆ ಅರ್ಜಿ ಇತ್ಯರ್ಥದಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇದೇ ರೀತಿಯ ಪ್ರಕರಣಗಳಲ್ಲಿ ಆರು ತಿಂಗಳವರೆಗೂ ಕಾದು ನೋಡಿದ ನಿದರ್ಶನಗಳಿವೆ

* ಮೊದಲು ಅನರ್ಹತೆಯ ಅರ್ಜಿ ಕುರಿತು ನಿರ್ಧಾರ ಆಗಬೇಕಿದೆ

ರಾಜೀವ್ ಧವನ್‌- ಎಚ್‌ಡಿಕೆ ಪರ ವಕೀಲ

* ಇದು ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣವಲ್ಲ. ವೈಯಕ್ತಿಕ ಕಾರಣಗಳಿಗೆ ನೀಡಲಾದ ರಾಜೀನಾಮೆ ಕುರಿತ ಪ್ರಕರಣವನ್ನು ಸ್ಪೀಕರ್‌ ಪ್ರತ್ಯೇಕವಾಗಿ ಪರಿಗಣಿಸಬೇಕು. ಅದಕ್ಕೆ ಸಮಯ ಬೇಕು

* ರಾಜೀನಾಮೆ ಮತ್ತು ಅನರ್ಹತೆಗೆ ಸೀಮಿತವಾಗಿ ಈ ಪ್ರಕರಣವನ್ನು ಸಂಕುಚಿತಗೊಳಿಸಬಾರದು. ಸ್ಪೀಕರ್ ಅವರದ್ದು ಸಾಂವಿಧಾನಿಕ ಹುದ್ದೆ

* ಅಲ್ಪಮತದ ಸರ್ಕಾರ ಉಳಿಸಲು ಸ್ಪೀಕರ್ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಇದೆ. ಸ್ಪೀಕರ್ ದುರುದ್ದೇಶ ಹೊಂದಿದ್ದಾರೆ ಎಂದು ದೂರಲಾಗಿದೆ. ದುರುದ್ದೇಶ ಏನು ಎಂಬ ವಿವರಗಳಿಲ್ಲ

* ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಶಾಸಕರು ಒಂದಾಗಿ ರಾಜೀನಾಮೆಯ ವೇದಿಕೆ ಸಿದ್ಧಪಡಿಸಿದ್ದಾರೆ. ಇದನ್ನು ಸ್ಪೀಕರ್ ಗಮನಿಸಬೇಡವೇ?

* ಸರ್ಕಾರ ಕೆಡವಲು ನೆರವಾಗಿ ಎಂದು ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಈ ಪ್ರಕರಣದಲ್ಲಿ ಶಾಸಕರು ರಾಜೀನಾಮೆ ನೀಡುವುದರ ಹಿಂದಿನ ಉದ್ದೇಶ ಮತ್ತು ಪ್ರೇರಣೆ ಏನು ಎಂಬುದು ಮುಖ್ಯ

* ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಿದ ನಂತರವೇ ಕೋರ್ಟ್ ಆ ಕುರಿತು ವಿಚಾರಣೆ ನಡೆಸಬಹುದು. ಅದಕ್ಕೂ ಮೊದಲು ನ್ಯಾಯಾಂಗಕ್ಕೆ ಪರಾಮರ್ಶೆ ಅಧಿಕಾರವಿಲ್ಲ

* ರಾಜೀನಾಮೆ ಅರ್ಜಿಗಳನ್ನು ಪರಿಶೀಲಿಸುತ್ತಿರುವ ಸ್ಪೀಕರ್ ಬಗ್ಗೆ ನ್ಯಾಯಾಲಯ ನಂಬಿಕೆ ಹೊಂದಬೇಕು ಎಂದು ಅನೇಕ ಪ್ರಕರಣಗಳ ತೀರ್ಪುಗಳು ಸ್ಪಷ್ಟಪಡಿಸಿವೆ.

**

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.