ADVERTISEMENT

ಬ್ರಿಟನ್‌ಗೆ ಕರ್ನಾಟಕದ 30 ವಿದ್ಯಾರ್ಥಿಗಳು: ಉನ್ನತ ಶಿಕ್ಷಣ ಪರಿಷತ್‌ ಒಪ್ಪಂದ

ಶಿಕ್ಷಣ ಕಲಿಕೆ, ಭಾಷಾ ಕೌಶಲ ವೃದ್ಧಿಗೆ ಬ್ರಿಟಿಷ್‌ ಕೌನ್ಸಿಲ್‌ ಸಹಕಾರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 16:11 IST
Last Updated 10 ಸೆಪ್ಟೆಂಬರ್ 2024, 16:11 IST
ಬೆಂಗಳೂರು ನಗರ ವಿಶ್ವವಿದ್ಯಾನಿಯಲದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸ್ಥಾಪಿಸಿರುವ ಡಿಜಿಟಲ್‌ ಗ್ರಂಥಾಲಯವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಮಂಗಳವಾರ ಉದ್ಘಾಟಿಸಿದರು. ಚಂದ್ರು ಅಯ್ಯರ್‌, ಲಿಂಗರಾಜ ಗಾಂಧಿ, ಅಲಿಸನ್‌ ಬ್ಯಾರೆಟ್‌ ಭಾಗಿಯಾಗಿದ್ದರು: ಪ್ರಜಾವಾಣಿ ಚಿತ್ರ.
ಬೆಂಗಳೂರು ನಗರ ವಿಶ್ವವಿದ್ಯಾನಿಯಲದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸ್ಥಾಪಿಸಿರುವ ಡಿಜಿಟಲ್‌ ಗ್ರಂಥಾಲಯವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಮಂಗಳವಾರ ಉದ್ಘಾಟಿಸಿದರು. ಚಂದ್ರು ಅಯ್ಯರ್‌, ಲಿಂಗರಾಜ ಗಾಂಧಿ, ಅಲಿಸನ್‌ ಬ್ಯಾರೆಟ್‌ ಭಾಗಿಯಾಗಿದ್ದರು: ಪ್ರಜಾವಾಣಿ ಚಿತ್ರ.   

ಬೆಂಗಳೂರು: ಕರ್ನಾಟಕದ ಪದವಿ ವಿದ್ಯಾರ್ಥಿಗಳಿಗೆ ಬ್ರಿಟನ್‌ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಅವಕಾಶ ಒದಗಿಸುವುದೂ ಸೇರಿದಂತೆ ನಾಲ್ಕು ಅಂಶಗಳನ್ನು ಅನುಷ್ಠಾನಗೊಳಿಸಲು ಬ್ರಿಟಿಷ್‌ ಕೌನ್ಸಿಲ್‌ ಜೊತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಮಂಗಳವಾರ ಒಪ್ಪಂದ ಮಾಡಿಕೊಂಡಿತು.

ಮೊದಲ ಕಂತಿನಲ್ಲಿ 30 ವಿದ್ಯಾರ್ಥಿಗಳು ನ.9ರಿಂದ 22ರವರೆಗೆ ಪೂರ್ವ ಲಂಡನ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕಲಬುರಗಿ, ರಾಯಚೂರು, ತುಮಕೂರು ವಿಶ್ವವಿದ್ಯಾಲಯಗಳಿಂದ ತಲಾ ಐವರು ವಿದ್ಯಾರ್ಥಿಗಳು ಮತ್ತು ತಲಾ ಒಬ್ಬರು ಅಧ್ಯಾಪಕರಿಗೆ ಅವಕಾಶ ಲಭಿಸಿದೆ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷಾ ಕೌಶಲ ತರಬೇತಿ, ಅಧ್ಯಾಪಕರು, ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್‌ ಗ್ರಂಥಾಲಯ ಸ್ಥಾಪನೆ ಒಪ್ಪಂದದ ಇತರೆ ಅಂಶಗಳು. 

ADVERTISEMENT

ಒಪ್ಪಂದದ ನಂತರ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ‘ರಾಜ್ಯದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಅಧ್ಯಾಪಕರ ಭಾಷಾ ಪ್ರಾವೀಣ್ಯತೆ ವೃದ್ಧಿ, ಉದ್ಯೋಗ ಆಧಾರಿತ ಶಿಕ್ಷಣ ದೊರಕಿಸಲು ಬ್ರಿಟಿಷ್ ಕೌನ್ಸಿಲ್‌ ಸಹಕಾರ ನೀಡುತ್ತಿದೆ’ ಎಂದರು.

‘16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ 5,795 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಇಂಗ್ಲಿಷ್‌ ಭಾಷಾ ಕೌಶಲ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಇಂಗ್ಲಿಷ್‌ ಭಾಷೆ ಮತ್ತು ಸಂವಹನ ಕೌಶಲ ಉತ್ತಮಪಡಿಸಲು ಇಂತಹ ಕಾರ್ಯಕ್ರಮ ರೂಪಿಸಲಾಗಿದೆ. ಮೈಕ್ರೋಸಾಫ್ಟ್‌ ಇಂಡಿಯಾ ಸಹಭಾಗಿತ್ವ ನೀಡಿದೆ’ ಎಂದು ಹೇಳಿದರು.

‘ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟಕ್ಕೆ ಪೂರಕವಾಗಿ ಕರ್ನಾಟಕದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಸಜ್ಜುಗೊಳಿಸಲು ಬ್ರಿಟಷ್‌ ಕೌನ್ಸಿಲ್‌ ಕಾರ್ಯಾಗಾರ ಆಯೋಜಿಸುತ್ತಿದ್ದು, 28 ವಿಶ್ವವಿದ್ಯಾಲಯಗಳ 56 ಪ್ರಾಧ್ಯಾಪಕರು ಭಾಗವಹಿಸುತ್ತಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್‌ ಡೆಪ್ಯೂಟಿ ಹೈಕಮಿಷನರ್‌ ಚಂದ್ರು ಅಯ್ಯರ್, ಇಂಡಿಯಾ ಬ್ರಿಟಿಷ್‌ ಕೌನ್ಸಿಲ್‌ ನಿರ್ದೇಶಕಿ ಅಲಿಸನ್‌ ಬ್ಯಾರೆಟ್‌, ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್‌, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಎಸ್.ನಿರಂಜನ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್‌.ಎಂ. ಜಯಕರ, ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೆಂಕಟೇಶ್ವರಲು ಉಪಸ್ಥಿತರಿದ್ದರು.

ಡಿಜಿಟಲ್‌ ಗ್ರಂಥಾಲಯ ಆರಂಭ

ಬೆಂಗಳೂರು ನಗರ ವಿಶ್ವವಿದ್ಯಾನಿಯಲದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸ್ಥಾಪಿಸಿರುವ ಡಿಜಿಟಲ್‌ ಗ್ರಂಥಾಲಯವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್‌ ಮಂಗಳವಾರ ಉದ್ಘಾಟಿಸಿದರು. ‘ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳನ್ನು ಗ್ರಂಥಾಲಯ ಒದಗಿಸಲಿದೆ. ಸಂಶೋಧನೆಗಳಿಗೆ ಅಗತ್ಯವಾದ ಗ್ರಂಥಗಳು ನಿಯತಕಾಲಿಕೆಗಳು ಪ್ರಕಟಣೆಗಳು ಸಂಗೀತ ಚಲನಚಿತ್ರ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚಿನ ಸಂಪನ್ಮೂಲಗಳನ್ನು ಗ್ರಂಥಾಲಯ ಒದಗಿಸುತ್ತದೆ’ ಎಂದು ಕುಲಪತಿ ಲಿಂಗರಾಜ ಗಾಂಧಿ ಹೇಳಿದರು.      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.