ಬೆಂಗಳೂರು: ‘ಮುಂದಿನ ಐದು ವರ್ಷಗಳಲ್ಲಿ ದೇಶದ ಶೇ 90ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ನ್ಯಾಕ್ ಮೌಲ್ಯಾಂಕನದ ವ್ಯಾಪ್ತಿಗೆ ತರುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನಿರ್ದೇಶಕ ಪ್ರೊ.ಗಣೇಶನ್ ಕಣ್ಣಬೀರನ್ ಹೇಳಿದರು.
ನ್ಯಾಕ್‌ನ 30ನೇ ಸಂಸ್ಥಾಪನಾ ದಿನಾಚರಣೆ ಭಾಗವಾಗಿ ನಗರದಲ್ಲಿನ ನ್ಯಾಕ್ ಕ್ಯಾಂಪಸ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘30 ವರ್ಷಗಳಲ್ಲಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿಸುವಲ್ಲಿ ನ್ಯಾಕ್ ಶ್ರಮವಹಿಸಿದೆ. ಮುಂದಿನ ದಿನಗಳಲ್ಲೂ ಆ ಕೆಲಸವನ್ನು ಮಾಡಲಿದೆ’ ಎಂದರು.
ಇದಕ್ಕೆ ಪೂರಕವಾಗಿ ಮಾತನಾಡಿದ ನ್ಯಾಕ್ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಪ್ರೊ.ಅನಿಲ್ ಡಿ ಸಹಸ್ರಬುದ್ಧೆ, ‘ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ‘ಲೆವೆಲ್–1ರಿಂದ ಲೆವೆಲ್–5’ ಎಂದು ಭಿನ್ನ ಶ್ರೇಣಿಗಳನ್ನು ನೀಡುವ ಪ್ರಸ್ತಾವ ನ್ಯಾಕ್ ಮುಂದೆ ಇದೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಸಂಸ್ಥೆಗಳಿಗೆ ಲೆವೆಲ್–1ರಿಂದ ಲೆವೆಲ್–4ರವರೆಗಿನ ಶ್ರೇಣಿ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರ‍್ಯಾಂಕಿಂಗ್ ಹೊಂದಿರುವ ಸಂಸ್ಥೆಗಳಿಗೆ ಲೆವೆಲ್–5 ಶ್ರೇಣಿ ನೀಡಲಾಗುತ್ತದೆ’ ಎಂದರು.
‘ದೇಶದ ಕೆಲ ರಾಜ್ಯಗಳಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಗೆ ತಂದಿವೆ. ಹಲವು ರಾಜ್ಯಗಳು ಎನ್‌ಇಪಿ ಜಾರಿಗೆ ಹಿಂದೇಟು ಹಾಕುತ್ತಿವೆ. ಎಲ್ಲ ರಾಜ್ಯಗಳಲ್ಲಿ ಎನ್‌ಇಪಿ ಜಾರಿ ಮಾಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ನ್ಯಾಕ್ ಕ್ರಮವಹಿಸಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಕೆ.ಶ್ರೀಧರ್, ‘ವಿಶ್ವದಲ್ಲೇ ಅತಿಹೆಚ್ಚು ಜನರು ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿ, ಎನ್‌ಇಪಿಯನ್ನು ರೂಪಿಸಲಾಗಿದೆ. ಅದರ ಅನುಷ್ಠಾನವೂ ಅಷ್ಟೇ ಪರಿಣಾಮಕಾರಿಯಾಗಿ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.