ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ರದ್ದುಗೊಂಡಿದ್ದ ನಿಲಯ ಪಾಲಕರ (ಹಾಸ್ಟೆಲ್ ವಾರ್ಡನ್) ಹುದ್ದೆಗಳನ್ನು ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯದೆ ಮರು ಸೃಜಿಸಿ ತರಾತುರಿಯಲ್ಲಿ 312 ನಿಲಯ ಮೇಲ್ವಿಚಾರಕರಿಗೆ ಬಡ್ತಿ ನೀಡಲಾಗಿದೆ!
‘ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು–2019’ ಈಗ ಜಾರಿಯಲ್ಲಿದೆ. ಆಗ ಇಲಾಖೆಯಲ್ಲಿ ಪುರುಷ ನಿಲಯ ಪಾಲಕರ 118 ಕಾಯಂ ಹುದ್ದೆಗಳಿದ್ದವು. ಆ ಹುದ್ದೆಗಳನ್ನು ಮುಂಬಡ್ತಿ ಅಥವಾ ನೇರ ನೇಮಕಾತಿ ಮೂಲಕ ಭರ್ತಿ ಮಾಡುವಂತಿಲ್ಲ ಎಂಬ ನಿರ್ಬಂಧವೂ ನಿಯಮಗಳಲ್ಲಿದೆ.
ಹೊಸ ನಿಯಮಗಳು ಜಾರಿಯಾದ ಬಳಿಕ, ಆಗ ಸೇವೆಯಲ್ಲಿದ್ದವರ ಹೊರತಾಗಿ ನಿಲಯ ಪಾಲಕರ ಹುದ್ದೆಗಳನ್ನೇ ರದ್ದು ಮಾಡಲಾಗಿತ್ತು. ಹೊಸ ಹುದ್ದೆಗಳ ಸೃಜನೆಗೂ ಅವಕಾಶ ಇಲ್ಲ. ನಿಲಯ ಮೇಲ್ವಿಚಾರಕರಿಗೆ ಕಚೇರಿ ಮೇಲ್ವಿಚಾರಕರು ಅಥವಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಹುದ್ದೆಗೆ ಮಾತ್ರ ಬಡ್ತಿ ನೀಡಲು ಅವಕಾಶವಿದೆ ಎಂದು ನಿಯಮ ರೂಪಿಸಿ, ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು
ನಿಲಯ ಮೇಲ್ವಿಚಾರಕರ ಬಡ್ತಿ ವಿಚಾರದ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭದಲ್ಲೆಲ್ಲ, ಅಧಿಸೂಚನೆಯಲ್ಲಿದ್ದ ನಿರ್ಬಂಧವನ್ನು ಉಲ್ಲೇಖಿಸುತ್ತಾ ಬಂದಿದ್ದ ಇಲಾಖೆಯು ದಿಢೀರ್ ನಿಲುವು ಬದಲಿಸಿದೆ. 312 ಮಂದಿಗೆ ಬಡ್ತಿ ನೀಡಿದ್ದರೂ, ಹುದ್ದೆಗಳ ಮಂಜೂರಾತಿಯೇ ಇಲ್ಲದಿರುವುದರಿಂದ ಅವರು ಹಾಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಲ್ಲೇ ಮುಂದುವರಿಸಿ ಆದೇಶ ನೀಡಲಾಗಿದೆ.
ಬೇಡಿಕೆ ತಿರಸ್ಕರಿಸಿದ್ದ ಆಯುಕ್ತ
ನಿಲಯ ಪಾಲಕರ ಹುದ್ದೆಗೆ ಬಡ್ತಿ ನೀಡುವಂತೆ ನಿಲಯ ಮೇಲ್ವಿಚಾರಕರು ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ, ಹುದ್ದೆಗಳು ಇಲ್ಲ ಎಂಬ ಕಾರಣ ನೀಡಿ ಅವರ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು.
‘ನಿಲಯ ಪಾಲಕರ ಹುದ್ದೆಗಳನ್ನು ರದ್ದುಗೊಳಿಸಿರುವುದರಿಂದ ಬಡ್ತಿ ನೀಡಲು ಅವಕಾಶ ಇಲ್ಲ’ ಎಂದು 2022ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ(ಬಿಜೆಪಿ ಸರ್ಕಾರದ ಅವಧಿ) ಇಲಾಖೆ ಆಯುಕ್ತರಾಗಿದ್ದ ಕೆ.ಎ. ದಯಾನಂದ, ನಿಲಯ ಮೇಲ್ವಿಚಾರಕರಿಗೆ ಹಿಂಬರಹ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅದೇ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿರುವ ಕೆ.ಎ. ದಯಾನಂದ ಅವರೇ, ಮುಂಬಡ್ತಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದಾರೆ.
ತರಾತುರಿ ಪ್ರಕ್ರಿಯೆ
ವರ್ಷಗಳ ಕಾಲದಿಂದಲೂ ನಿಲಯ ಮೇಲ್ವಿಚಾರಕರಿಗೆ ಬಡ್ತಿ ನಿರಾಕರಿಸುತ್ತಾ ಬಂದಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜುಲೈ ಕೊನೆಯ ವಾರ ದಿಢೀರ್ ನಿಲುವು ಬದಲಿಸಿದೆ. ನಾಲ್ಕೇ ದಿನಗಳಲ್ಲಿ ಬಡ್ತಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ, ಆದೇಶವನ್ನೂ ಹೊರಡಿಸಲಾಗಿದೆ.
‘ಜುಲೈ 22ರಂದು 460 ನಿಲಯ ಮೇಲ್ವಿಚಾರಕರ ಸೇವಾ ವಿವರಗಳನ್ನು ಗೂಗಲ್ ಶೀಟ್ ಮೂಲಕ ಪಡೆಯಲಾಗಿದೆ. ನಿಲಯ ಮೇಲ್ವಿಚಾರಕರ ಸೇವಾ ಪುಸ್ತಕಗಳನ್ನು ಕಳುಹಿಸುವಂತೆ ಸರ್ಕಾರಿ ರಜಾ ದಿನವಾಗಿದ್ದ ಜುಲೈ 23ರಂದು (ಭಾನುವಾರ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಅನಧಿಕೃತವಾಗಿ ದೂರವಾಣಿ ಕರೆ ಮೂಲಕ ಸೂಚನೆ ನೀಡಲಾಗಿತ್ತು. ಜುಲೈ 24ರಂದು ಸೇವಾ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿ, ಮುಂಬಡ್ತಿ ಸಮಿತಿ ನಡೆಸಿ 312 ಮಂದಿಗೆ ಬಡ್ತಿ ನೀಡಲಾಗಿದೆ. ಇಡೀ ಇಲಾಖೆ ಇ–ಆಫೀಸ್ ಮೂಲಕ ನಡೆಯುತ್ತಿದ್ದರೂ, ಈ ಬಡ್ತಿಯ ಕಡತವನ್ನು ತಂತ್ರಾಂಶದಲ್ಲಿ ನಿರ್ವಹಿಸಿಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ದೂರಿದ್ದಾರೆ.
‘ಇಲಾಖೆಯ ಅನುಮತಿ ಇದೆ’
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ಎ. ದಯಾನಂದ, ‘ಹುದ್ದೆಗಳು ರದ್ದಾಗುವ ಮೊದಲೇ ತಮಗೆ ಬಡ್ತಿಯ ಅರ್ಹತೆ ಇತ್ತು ಎಂಬುದಾಗಿ ಹಲವು ನೌಕರರು ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಒಂದು ಬಾರಿಗೆ ಬಡ್ತಿಗೆ ಅವಕಾಶ ನೀಡಲು ಅನುಮತಿ ಕೋರಿ ನಾಲ್ಕು ತಿಂಗಳ ಹಿಂದೆಯೇ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇಲಾಖೆಯು ನೀಡಿದ ಅನುಮತಿ ಆಧಾರದಲ್ಲಿ 312 ಮಂದಿಗೆ ಬಡ್ತಿ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.