ADVERTISEMENT

ಕಪ್ಪತಗುಡ್ಡ: 322 ಚದರ ಕಿ.ಮೀ ಪರಿಸರ ಸೂಕ್ಷ್ಮ ‍ಪ್ರದೇಶ

ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ ಪರಿಸರ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 14:37 IST
Last Updated 7 ಅಕ್ಟೋಬರ್ 2024, 14:37 IST
ಕಪ್ಪತಗುಡ್ಡ
ಕಪ್ಪತಗುಡ್ಡ   

ನವದೆಹಲಿ: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮದ 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ‍ಪ್ರದೇಶವೆಂದು ನಿಗದಿಪಡಿಸಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿವೆ. ಈ ಪ್ರದೇಶದಲ್ಲಿ 62 ಗ್ರಾಮಗಳು ಬರಲಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀ ಯಿಂದ ಗರಿಷ್ಠ 4.30 ಕಿ.ಮೀ ವರೆಗೆ ಗುರುತಿಸಲಾಗಿದೆ. ಉತ್ತರ ದಿಕ್ಕಿನಲ್ಲಿ 1 ಕಿ.ಮೀ.ಯಿಂದ 3.25 ಕಿ.ಮೀ ವರೆಗೆ, ಪಶ್ಚಿಮ ದಿಕ್ಕಿನಲ್ಲಿ 1 ಕಿ.ಮೀ.ಯಿಂದ 4.30 ಕಿ.ಮೀ ವರೆಗೆ, ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀ ವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದೆ. ಉಳಿದ ದಿಕ್ಕುಗಳಲ್ಲಿ 1 ಕಿ.ಮೀ. ಮಾತ್ರ ಇದೆ. 

ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಗಣಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯಲ್ಲಿ ಗಡಿ ನಿಗದಿಪಡಿಸಲಾಗಿದೆ ಎಂಬ ಅನುಮಾನವನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ. 

ADVERTISEMENT

ಮೇಲ್ವಿಚಾರಣಾ ಸಮಿತಿ:

ಪರಿಸರ ಸೂಕ್ಷ್ಮ ಪ್ರದೇಶದ ಮೇಲ್ವಿಚಾರಣೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಗದಗ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವನ್ಯಜೀವಿ ತಜ್ಞರು ಸೇರಿ 9 ಮಂದಿ ಸದಸ್ಯರಾಗಿರುವರು. 

‌‘ಉತ್ತರ ಹಾಗೂ ಪಶ್ಚಿಮ ದಿಕ್ಕು ಬಿಟ್ಟರೆ ಪರಿಸರ ಸೂಕ್ಷ್ಮ ವಲಯದ ಮಿತಿಯನ್ನು ಬಹುತೇಕ ಎಲ್ಲೆಡೆ ಕೇವಲ ಒಂದರಿಂದ ಗರಿಷ್ಠ 1.96 ಕಿ.ಮೀ ವರೆಗೆ ನಿಗದಿ ಮಾಡಿರುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ಗಣಿಗಾರಿಕೆ ಪ್ರಸ್ತಾವಿತ ಜಾಗಗಳು ಈ ಪ್ರದೇಶಗಳಿಗೆ ಹತ್ತಿರವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲಾಗುವುದು’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ತಿಳಿಸಿದರು. 

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದಕ್ಕೆ ನಿರ್ಬಂಧ 

  • ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕಲ್ಲು ಪುಡಿ ಮಾಡುವ ಘಟಕಗಳನ್ನು ಪೂರ್ಣ ನಿಷೇಧಿಸಲಾಗಿದೆ

  •  ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ

  •  ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ

  •  ಯಾವುದೇ ಅಪಾಯಕಾರಿ ವಸ್ತು ಬಳಕೆ ಅಥವಾ ಉತ್ಪಾದನೆ ಅಥವಾ ಸಂಸ್ಕರಣೆಗೆ ನಿರ್ಬಂಧ

  •  ನೈಸರ್ಗಿಕ ಜಲಮೂಲಗಳು ಅಥವಾ ಸಂಸ್ಕರಿಸದ ತ್ಯಾಜ್ಯಗಳ ವಿಸರ್ಜನೆ ನಿಷೇಧ

  •  ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯಕ್ಕೆ ಸುಡುವ ಘಟಕಕ್ಕಿಲ್ಲ ಅವಕಾಶ

  •  ಈಗಿರುವ ಹಾಗೂ ಹೊಸದಾಗಿ ಇಟ್ಟಿಗೆ ಗೂಡುಗಳ ಘಟಕ ಸ್ಥಾಪನೆಗೆ ನಿಷೇಧ

  •  ಮರದ ಮಿಲ್‌ಗಳಿಗೆ ನಿರ್ಬಂಧ

  • ದೊಡ್ಡ ಪ್ರಮಾಣದಲ್ಲಿ ಜಾನುವಾರು ಹಾಗೂ ಕೋಳಿಗಳ ಫಾರ್ಮ್‌ಗಳಿಗೆ ಅವಕಾಶ ಇಲ್ಲ

  • ಮರ ಆಧಾರಿತ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ

  • ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಹೋಟೆಲ್‌ಗಳು ಹಾಗೂ
    ರೆಸಾರ್ಟ್‌ಗಳನ್ನು ತೆರೆಯುವಂತಿಲ್ಲ

ಸಾರಾಂಶ

ಮುಖ್ಯಾಂಶಗಳು

  • ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಕರ್ನಾಟಕ ಸರ್ಕಾರದಿಂದ 2019ರ ಮೇ ತಿಂಗಳಲ್ಲಿ ಅಧಿಸೂಚನೆ

  • ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ 244.15 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ ಈ ವನ್ಯಜೀವಿಧಾಮ

  • ಕಪ್ಪತಗುಡ್ಡ ಮೀಸಲು ಅರಣ್ಯದಲ್ಲಿ 500 ವಿಧದ ಅಪರೂಪದ ಔಷಧೀಯ ಸಸ್ಯಗಳು ಇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.