ADVERTISEMENT

ರಾಜ್ಯದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ 33 ಪೊಲೀಸ್‌ ಠಾಣೆ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ: ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:38 IST
Last Updated 20 ಜೂನ್ 2024, 15:38 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳನ್ನು ‘ವಿಶೇಷ ಪೊಲೀಸ್‌ ಠಾಣೆ’ಗಳೆಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿ ಜಿಲ್ಲೆಗೊಂದು ಠಾಣೆ ಮತ್ತು ಬೆಂಗಳೂರಿನಲ್ಲಿ ಎರಡು ಈ ವಿಶೇಷ ಪೊಲೀಸ್‌ ಠಾಣೆಗಳಿರಲಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಈ ಠಾಣೆಗಳಿಗೆ ವರ್ಗಾಯಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ADVERTISEMENT

ಒಳಾಡಳಿತ ಇಲಾಖೆಯಿಂದ ಸಿಆರ್‌ಪಿಸಿ ಕಾಯ್ದೆ 1973ರ ಕಲಂ 2 ಎಸ್‌ ಅಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿಶೇಷ ಪೊಲೀಸ್‌ ಠಾಣೆಗಳು ಇವೆ. ರಾಜ್ಯದಲ್ಲಿ  2022 ರ ಡಿಸೆಂಬರ್‌ವರೆಗೆ 7,633 ಪ್ರಕರಣಗಳು ಮಾತ್ರ ನ್ಯಾಯಾಲಯಕ್ಕೆ ಬಂದಿವೆ. ಈ ಪೈಕಿ 1,723 ಪ್ರಕರಣಗಳು ವಿಲೇವಾರಿ ಆಗಿವೆ. 1,363 ಪ್ರಕರಣಗಳು ಖುಲಾಸೆ ಆಗಿದ್ದು, ಕೇವಲ 68 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಶಿಕ್ಷೆ ಪ್ರಮಾಣ ಶೇ 4ರಷ್ಟು ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 2,000 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ಮುಂದೆ ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ವಿಶೇಷ ಠಾಣೆಗಳಲ್ಲಿಯೇ ದಾಖಲಿಸಲಾಗುವುದು. ನಿಗದಿತ ಅವಧಿಯಲ್ಲಿ ತನಿಖೆ ನಡೆಸಿ, ನಿಗದಿತ ಸಮಯದೊಳಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಇದರಿಂದಾಗಿ ಸಮಯಬದ್ಧವಾಗಿ ಮತ್ತು ನ್ಯಾಯೋಚಿತವಾಗಿ ತನಿಖೆ ನಡೆಸಬಹುದಾಗಿದೆ. ತನಿಖೆಯ ಗುಣಮಟ್ಟವೂ ಹೆಚ್ಚಾಗಲಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಆರ್ಥಿಕ ದುಃಸ್ಥಿತಿಯ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಲು ಸಹಾಯಕವಾಗುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 24ರಷ್ಟು ಈ ಸಮುದಾಯದವರೇ ಇದ್ದಾರೆ ಎಂದು ಪಾಟೀಲ ತಿಳಿಸಿದರು.

ಪ್ರತಿಯೊಂದು ವಿಶೇಷ ಠಾಣೆಯಲ್ಲೂ ಡಿವೈಎಸ್‌ಪಿ/ಎಸಿಪಿ ದರ್ಜೆಯ ಅಧಿಕಾರಿಗಳು ಇರುತ್ತಾರೆ. ಇಡೀ ರಾಜ್ಯಕ್ಕೆ 1 ಎಡಿಜಿಪಿ, 1 ಐಜಿಪಿ, 10 ಎಸ್‌ಪಿ, 12 ಡಿವೈಎಸ್‌ಪಿ, 27 ಪಿಐ, 181 ಹೆಡ್‌ ಕಾನ್‌ಸ್ಟೆಬಲ್‌ಗಳು ಮತ್ತು 412 ಕಾನ್‌ಸ್ಟೆಬಲ್‌ಗಳು ಸೇರಿ 677 ಹುದ್ದೆಗಳ ಅಗತ್ಯವಿದೆ ಎಂಬ ಪ್ರಸ್ತಾವನೆ ಇದೆ. ಈ ವಿಚಾರವನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಇಲಾಖೆಗಳು ಸಭೆಸಿ ತೀರ್ಮಾನ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದರು.

ವೇತನ ಪರಿಷ್ಕರಣೆ: ಸಿ.ಎಂಗೆ ಅಧಿಕಾರ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. 

ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಈ ವಿಷಯ ಪ್ರಸ್ತಾಪವಾಯಿತು. ಶೇ 27.5ರಷ್ಟು ಫಿಟ್‌ಮೆಂಟ್ ನೀಡಲು ಆಯೋಗ ಶಿಫಾರಸು ಮಾಡಿದೆ. ಕೆಲವು ಸಚಿವರು ಅಷ್ಟನ್ನೇ ಕೊಡುವುದಕ್ಕೆ ಸಮ್ಮತಿಸಿದರೆ, ಕೆಲವರು ಶೇ 25ಕ್ಕೆ ಸೀಮಿತಗೊಳಿಸಿದರೆ ಸಾಕು ಎಂದು ಸಲಹೆ ನೀಡಿದರು. ಮತ್ತೆ ಕೆಲವು ಸಚಿವರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ನೌಕರರು ಬಿಜೆಪಿಗೆ ಮತ ಹಾಕಿರುವಾಗ, ವೇತನ ಪರಿಷ್ಕರಣೆ ಮಾಡಬೇಕಾ ಎಂದೂ ಪ್ರಶ್ನಿಸಿದ್ದಾಗಿ ಮೂಲಗಳು ಹೇಳಿವೆ.

ಜುಲೈನಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಒಪ್ಪಿಕೊಳ್ಳಲಾಗಿದೆ. ದಿನಾಂಕ ತೀರ್ಮಾನಿಸುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಅಧಿವೇಶನ ಎರಡು ವಾರ ನಡೆಯಲಿದೆ.

ಜನವರಿ 26, ಆಗಸ್ಟ್‌ 15 ಮತ್ತು ನವೆಂಬರ್‌ 26ರ ಸಂವಿಧಾನ ದಿನಾಚರಣೆಗಳಂದು ಎಲ್ಲಾ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರದ ಜತೆಗೆ ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವನ್ನೂ ಇಟ್ಟು ಆಚರಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಶಾಲೆ, ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್‌, ನೀರು

ರಾಜ್ಯ ಎಲ್ಲ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್‌ ಮತ್ತು ನೀರಿನ ಸೌಲಭ್ಯವನ್ನು ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1,234 ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್‌ ಮತ್ತು ನೀರಿನ ಸೌಲಭ್ಯವನ್ನು ₹29.19 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು. ಈವರೆಗೆ ಈ ಮೊತ್ತವನ್ನು ಎಸ್‌ಡಿಎಂಸಿಗಳು ಭರಿಸುತ್ತಿದ್ದವು ಎಂದು ಹೇಳಿದರು.

ಕೆಜಿಎಫ್‌: ಚಿನ್ನದ ಗಣಿ ಚಟುವಟಿಕೆಗೆ ಒಪ್ಪಿಗೆ

ಕೆಜಿಎಫ್‌ನ ಭಾರತ್‌ ಚಿನ್ನದ ಗಣಿ ಲಿಮಿಟೆಡ್(ಬಿಜಿಎಂಎಲ್‌) ಆವರಣದಲ್ಲಿ ಸೈನೇಡ್‌ ಗುಡ್ಡ ಎಂದೇ ಕರೆಯಲಾಗುವ 13 ಟೈಲಿಂಗ್‌ ಡಂಪ್‌ (ಚಿನ್ನ ತೆಗೆದ ಬಳಿಕ ಉಳಿದ ಮಣ್ಣಿನ ದಿಬ್ಬ) ಪ್ರದೇಶದಲ್ಲಿ ಗಣಿ ಚಟುವಟಿಕೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

5213.21 ಹೆಕ್ಟೇರ್‌ ಪ್ರದೇಶದಲ್ಲಿ ಈ ಚಟುವಟಿಕೆಗಳು ನಡೆಯಲಿವೆ. 2,330 ಎಕರೆ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಕೈಗಾರಿಕಾ ವಸಾಹತುವನ್ನು ಸ್ಥಾಪಿಸಲು ನೀಡಬೇಕು ಎನ್ನುವ ಬೇಡಿಕೆ ಸರ್ಕಾರದ್ದಾಗಿದೆ. ಇದರಿಂದಾಗಿ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.