ಬೆಂಗಳೂರು: ಬೆಸ್ಕಾಂ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ 34 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಆಸ್ತಿ ಮೌಲ್ಯ ಶೂನ್ಯಕ್ಕೆ ತಲುಪಿದೆ’ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.
ಮಂಗಳವಾರ ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸಲಾಗಿದ್ದು, ಅದರಲ್ಲಿ ಈ ವಿಷಯ ಬಹಿರಂಗವಾಗಿದೆ.
ಮಾರ್ಚ್ 2022ರ ಅಂತ್ಯಕ್ಕೆ ‘34 ಉದ್ದಿಮೆಗಳ ಒಟ್ಟು ಆಸ್ತಿ ಮೌಲ್ಯ ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಇದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಈ 34 ಉದ್ದಿಮೆಗಳಲ್ಲಿ 4 ಎಸ್ಕಾಂಗಳು (ಬೆಸ್ಕಾಂ, ಹೆಸ್ಕಾಂ, ಸಿಇಎಸ್‌ಇ ಹಾಗೂ ಜೆಸ್ಕಾಂ), ನಾಲ್ಕು ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ), ಡಾ. ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಲಿಡ್ಕರ್), ಮೈಷುಗರ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮುಂತಾದ ಸಂಸ್ಥೆಗಳು ಸೇರಿವೆ.
ಕರ್ನಾಟಕದ ಸರ್ಕಾರದ ಅಧೀನದಲ್ಲಿ 125 ಉದ್ದಿಮೆಗಳಿದ್ದು, ಈ ಪೈಕಿ 6 ಶಾಸನಬದ್ಧ ನಿಗಮಗಳು, 119 ಸರ್ಕಾರಿ ಕಂಪನಿಗಳು ಇವೆ. ಇದರಲ್ಲಿ 13 ಉದ್ದಿಮೆಗಳು ನಿಷ್ಕ್ರಿಯವಾಗಿವೆ.
‘54 ಸರ್ಕಾರಿ ಉದ್ದಿಮೆಗಳು ಒಟ್ಟು ₹37,893.24 ಕೋಟಿ ನಷ್ಟ ಅನುಭವಿಸಿವೆ. 54 ಉದ್ದಿಮೆಗಳ ಒಟ್ಟು ಆಸ್ತಿ – ₹17,912.56ಗೆ ತಲುಪಿವೆ. ಇವುಗಳ ಬಂಡವಾಳ ₹9,095.51 ಕೋಟಿ’ ಎಂದು ವರದಿಯಲ್ಲಿದೆ.
ಶೂನ್ಯ ಆಸ್ತಿ ಇರುವ 34 ಉದ್ದಿಮೆಗಳ ಪೈಕಿ 26 ಉದ್ದಿಮೆಗಳ ಬಂಡವಾಳ ಶೂನ್ಯಕ್ಕೆ ಮುಟ್ಟಿದ್ದು, 2022ರ ಮಾರ್ಚ್ ಅಂತ್ಯಕ್ಕೆ ಸರ್ಕಾರವು ಇವುಗಳ ₹42,567.68 ಕೋಟಿ ಸಾಲ ಮಾರುಪಾವತಿ ಮಾಡಬೇಕಿದೆ’ ಎನ್ನುವುದು ವರದಿಯ ಸಾರಾಂಶ.
2021–22ನೇ ಹಣಕಾಸು ವರ್ಷದಲ್ಲಿ 55 ಉದ್ದಿಮೆಗಳು ಲಾಭ ಗಳಿಸಿವೆ. ಈ ಪೈಕಿ 50 ಈ ಹಿಂದೆಯೂ ಲಾಭದಲ್ಲಿದ್ದವು. ಆದರೆ ಇವುಗಳ ಲಾಭದ ಪ್ರಮಾಣ ಕುಸಿತವಾಗಿದೆ. 2020–21ರಲ್ಲಿ ಈ ಉದ್ದಿಮೆಗಳು ₹ 2,987 ಕೋಟಿ ಲಾಭ ಗಳಿಸಿದ್ದರೆ, 2021–22ರ ವೇಳೆಗೆ ಅದು ₹2,608.22 ಕೋಟಿಗೆ ಇಳಿಕೆಯಾಗಿದೆ.
ಸರ್ಕಾರಿ ಉದ್ದಿಮೆಗಳು ಕಂಪನಿ ನಿಯಮಗಳ ಪ್ರಕಾರ ಸರಿಯಾದ ವೇಳೆಗೆ ಹಣಕಾಸು ವ್ಯವಹಾರದ ಮಾಹಿತಿಯನ್ನೂ ನೀಡುತ್ತಿಲ್ಲ ಎನ್ನುವ ಅಂಶವನ್ನೂ ಮಹಾಲೇಖಪಾಲರ ವರದಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.