ಬೆಂಗಳೂರು: ‘ಅನೇಕ ಯುಎಇ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್‌ಮೆಂಟ್ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಸಮ್ಮತಿಸಿದ್ದು,ಮುಂದಿನ ವರ್ಷಗಳಲ್ಲಿ ಸುಮಾರು ₹ 3,500 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
‘ದುಬೈ ಎಕ್ಸ್‌ಪೋ’ದಲ್ಲಿ ಭಾಗವಹಿಸಿ ಬಂದ ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಅಧಿಕಾರಿಗಳ ನೇತೃತ್ವದ ನಿಯೋಗದ ಜೊತೆ ಉದ್ಯಮಿಗಳನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಮನವರಿಕೆ ಮಾಡಿದ್ದೇನೆ’ ಎಂದರು.
‘ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಲುಲು ಗ್ರೂಪ್, ಮುಬದಾಲ, ಕೆಇಎಫ್ ಹೋಲ್ಡಿಂಗ್ಸ್ ದುಕಬ್, ಎಲೆಕ್ಟ್ರಿಕ್ ವೇ ಡಿಪಿ ವಲ್ಡ್, ಆಸ್ಟರ್ ಹೆಲ್ತ್ ಕೇರ್, ಎ.1 ಶಂಶಿ ಟ್ರಾವೆಲರ್ಸ್, ಬಿಎಲ್‍ಎಸ್ ಇಂಟರ್ ನ್ಯಾಷನಲ್, ಯುನೈಟೆಡ್ ಪಾರ್ಕ್ ಆ್ಯಂಡ್ ಸರ್ವೀಸ್, ಎಕ್ಸ್ ಪೋರ್ಟ್ ಬಹ್ರೇನ್, ಎಐಎಂಎಲ್, ತಗ್ಲೀಪ್ ಇಂಡಸ್ಟ್ರೀಸ್ ಸೇರಿದಂತೆ ಅನೇಕ ಕಂಪನಿಗಳು ಬಂಡವಾಳ ಹೂಡಿಕೆಗೆ ಸಮ್ಮತಿಸಿವೆ’ ಎಂದು ತಿಳಿಸಿದರು.
‘2022ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಉದ್ಯಮಿಗಳು ರಾಜ್ಯಕ್ಕೆ ಬರುವ ಸಂಭವವಿದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯವು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ಕ್ಲಸ್ಟರ್ ಆಗಿದೆ. ಭಾರತದಲ್ಲಿ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ ಎರಡನೇ ಅತಿದೊಡ್ಡ ಉತ್ಪಾದನಾ ರಾಜ್ಯವಾಗಿದೆ. ಅಂತರಿಕ್ಷ, ಬಾಹ್ಯಾಕಾಶ, ರಕ್ಷಣೆ, ಆರೋಗ್ಯ, ಕೈಮಗ್ಗ, ಆಹಾರ ಸಂಸ್ಕರಣೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳಲ್ಲಿ ಮನವಿ ಮಾಡಿದ್ದೇವೆ‘ ಎಂದರು.
‘ಕೆಐಎಡಿಬಿಯಿಂದ ಪಡೆದಿರುವ ಜಮೀನನ್ನು ಕೈಗಾರಿಕೆಗಳ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಯಾರಾದರೂ ಬಳಸಿದ್ದರೆ ಜಮೀನನ್ನು ಹಿಂಪಡೆಯಲಾಗುವುದು. ಈಗಾಗಲೇ ಕೆಲವರಿಗೆ ನೋಟಿಸ್ ಕೂಡ ನೀಡಲಾಗಿದೆ. ಯಾವುದೇ ಕಾರಣಕ್ಕೂ ಜಮೀನು ದುರುಪಯೋಗ ಆಗಲು ಬಿಡುವುದಿಲ್ಲ’ ಎಂದು
ಸ್ಪಷ್ಟಪಡಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.