ಚಾಮರಾಜನಗರ:ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಹೋಬಳಿ ಸತ್ತೇಗಾಲ ಗ್ರಾಮದ ಸರ್ವೇ ನಂಬರ್ 174ರಲ್ಲಿ ಬರುವ 3,766 ಹೆಕ್ಟೇರ್ (ಅಂದಾಜು 9,415 ಎಕರೆ) ಸರ್ಕಾರಿ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಪ್ರದೇಶಕ್ಕೆ ‘ಸತ್ತೇಗಾಲ–ಜಹಗೀರ್ ಮೀಸಲು ಅರಣ್ಯ’ ಎಂದು ಹೆಸರಿಡಲಾಗಿದೆ. ಇದರಿಂದಾಗಿಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರವಾದಂತಾಗಿದೆ.
ಒಟ್ಟು 5,101 ಹೆಕ್ಟೇರ್ ಭೂಮಿ ಇದ್ದು, ಈ ಪೈಕಿ 1,335 ಹೆಕ್ಟೇರ್ ಪ್ರದೇಶವನ್ನು ಬಿಟ್ಟು ಉಳಿದ ಜಾಗವನ್ನು 1963ರ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ–17ರ ಅಡಿಯಲ್ಲಿ ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. 2018ರ ಡಿಸೆಂಬರ್‌ನಲ್ಲೇ ಈ ಅಧಿಸೂಚನೆ ಹೊರಡಿಸಲಾಗಿದೆ.
ಹಳೆಯ ಪ್ರಸ್ತಾವ:1994ರಲ್ಲೇ ಈ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಲು ಉದ್ದೇಶಿಸಲಾಗಿತ್ತು. ಆದರೆ, ಪ್ರಸ್ತಾವ ನನೆಗುದಿಗೆ ಬಿದ್ದಿತ್ತು.
2016–17ರಲ್ಲಿಈ ಪ್ರಸ್ತಾವಕ್ಕೆ ಮತ್ತೆ ಜೀವ ಬಂದಿತ್ತು. ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್) ಡಾ.ಎಂ.ಮಾಲತಿಪ್ರಿಯ ಈ ವಿಚಾರದಲ್ಲಿ ಹೆಚ್ಚು ಕಾಳಜಿ ತೋರಿದ್ದರು.
ಇಡೀ ಪ್ರದೇಶವನ್ನು ಕೊಳ್ಳೇಗಾಲ ಉಪವಿಭಾಗಾಧಿಕಾರಿ, ಅರಣ್ಯ ವ್ಯವಸ್ಥಾಪನ ಅಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಪರಿಶೀಲಿಸಿ, ಮೀಸಲು ಅರಣ್ಯ ಎಂದು ಘೋಷಿಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
906 ಚದರ ಕಿ.ಮೀ ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಧಾವು ಜೀವ ವೈವಿಧ್ಯಗಳ ತಾಣ. 2018ರ ಹುಲಿಗಣತಿಯ ಪ್ರಕಾರ ಇಲ್ಲಿ 15 ಹುಲಿಗಳಿವೆ.
ಹುಲಿ ಸಂರಕ್ಷಿತ ಪ್ರದೇಶ ಶೀಘ್ರ: ಈ ಮಧ್ಯೆ, ಈ ವನ್ಯಧಾಮವು ಶೀಘ್ರದಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗುವುದು ಬಹುತೇಕ ಖಚಿತವಾಗಿದೆ.
ಬಂಡೀಪುರ ಅರಣ್ಯವೂ ವಿಸ್ತಾರ
ಈ ನಡುವೆ,ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಬರುವ 18 ಹಳ್ಳಿಗಳ ಕಂದಾಯ ಭೂಮಿಯನ್ನೂ ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಮಗುವಿನಹಳ್ಳಿ, ಮೇಲುಕಾಮನಹಳ್ಳಿ, ಸಿದ್ಧಾಪುರ, ಶಿವಪುರ, ಹುಂಡಿಪುರ, ಬೆಳಕವಾಡಿ, ಶೆಟ್ಟಹಳ್ಳಿ, ಯಲಚೆಟ್ಟಿ, ಲೊಕ್ಕೆರೆ, ಜಕ್ಕಳ್ಳಿ, ಬಾಚಹಳ್ಳಿ, ಮಂಗಲ, ಕೆಬ್ಬೇಪುರ, ಕಣಿಯನಪುರ ಮತ್ತು ತೆರಕಣಾಂಬಿ ಹೋಬಳಿಯ ಯರಿಯೂರು, ಹೆಗ್ಗವಾಡಿ, ಕುಂದಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಕಂದಾಯ ಭೂಮಿಯನ್ನುಮೀಸಲು ಅರಣ್ಯ ಎಂದು ಘೋಷಿಸಲಾಗಿದೆ.
**
ಮೀಸಲು ಅರಣ್ಯ ಎಂದು ಘೋಷಿಸಿರುವ ಪ್ರದೇಶ ಮಲೆಮಹದೇಶ್ವರ ವನ್ಯಧಾಮದ ಬಫರ್ ವಲಯದಲ್ಲಿದೆ. ಹೀಗಾಗಿ, ವನ್ಯಧಾಮ ಇನ್ನಷ್ಟು ವಿಸ್ತಾರವಾದಂತಾಗಿದೆ
- ವಿ.ಏಡುಕುಂಡಲು, ಡಿಸಿಎಫ್, ಮಲೆ ಮಹದೇಶ್ವರ ವನ್ಯಧಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.